ಹೊಸದಿಗಂತ ಮಂಡ್ಯ :
ಸಂಸತ್ ಚುನಾವಣೆ ಸಮಯದಲ್ಲೇ ಶ್ರೀರಾಮುಲು ಕಾಂಗ್ರೆಸ್‌ಗೆ ಬರುತ್ತಾರೆಂದು ಚರ್ಚೆ ಆಗಿತ್ತು. ಆ ಸಮಯದಲ್ಲಿ ಅವರು ಬರಲಿಲ್ಲ. ಈಗ ಕಾಂಗ್ರೆಸ್‌ಗೆ ಬರುತ್ತಾರೋ, ಇಲ್ಲವೋ ಗೊತ್ತಿಲ್ಲ. ಒಮ್ಮೆ ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜನಾರ್ದನ ರೆಡ್ಡಿ -ಶ್ರೀರಾಮುಲು ಜಗಳ ಅವರ ವೈಯಕ್ತಿಕ ವಿಚಾರ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪಕ್ಷದ ತತ್ವ-ಸಿದ್ದಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಬಂದರೂ ಸಂತೋಷ. ಅದರಂತೆ ಶ್ರೀರಾಮುಲು ಬಂದರೆ ಅಭ್ಯಂತರವಿಲ್ಲ. ಈ ಬಗ್ಗೆ ಹೈಕಮಾಂಡ್, ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್‌ಗೆ ಬೇರೆ ಬೇರೆ ಪಕ್ಷಗಳಿಂದ ಒಂದಷ್ಟು ಜನ ಶಾಸಕರು ಬರುತ್ತಾರೆಂದು ಹೇಳುತ್ತಿದ್ದಾರೆ. ಯಾರೇ ಬಂದರೂ ನಮಗೇನು ಬೇಜಾರಿಲ್ಲ. ಬರದಿದ್ದವರನ್ನು ಬರಲೇಬೇಕೆಂದು ಎಳೆದುಕೊಂಡು ಬರೋ ಪರಿಸ್ಥಿತಿ ನಮಗಿಲ್ಲ. ಏಕೆಂದರೆ, 138 ಶಾಸಕರು ಇರುವುದರಿಂದ ನಮಗೆ ಸಮಸ್ಯೆ ಇಲ್ಲ. ನಮ್ಮ ಪಕ್ಷಕ್ಕೆ ಬರುತ್ತೇವೆ ಎನ್ನುವವರಿಗೆ ಮೊದಲು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡಬೇಕು ಅಂತ ಹೇಳಿದ್ದೇವೆ ಎಂದು ತಿಳಿಸಿದರು.