ಹೊಸಗಂತ ಡಿಜಿಟಲ್ ಡೆಸ್ಕ್
ಭಾರತ- ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಶಸ್ತ್ರಾಸ್ತ್ರಗಳನ್ನು ಬೀಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಜಮ್ಮು ಮತ್ತು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಷ್ಕರ್-ಎ-ತಯ್ಯಬಾದ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಘಟಕವು ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಕಣಿವೆ ರಾಜ್ಯಕ್ಕೆ ರವಾನಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು, ಶ್ರೀನಗರ, ಕಥುವಾ, ಸಾಂಬಾ ಮತ್ತು ದೋಡಾ ಜಿಲ್ಲೆಗಳಲ್ಲಿ ಗುರುವಾರ ಎಂಟು ಸ್ಥಳಗಳಲ್ಲಿ ಶೋಧ ನಡೆಸಲಾಯಿತು.
ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಕಾರ್ಯಕರ್ತರು ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ. ” ವಿವಿಧ ವಸ್ತುಗಳು, ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲು ಈ ಹುಡುಕಾಟ ನಡೆಸಲಾಗಿದೆ ಎಂದು ಎನ್ಐಎ ಹೇಳಿದೆ.
ಟಿಆರ್‌ಎಫ್ ಕಾರ್ಯಕರ್ತರು ಎಲ್‌ಇಟಿಯ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಸಾಂಬಾದ ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಭಾರತೀಯ ಭೂಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ರವಾನೆ ಮತ್ತು ಇತರ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
“ಅಲ್ಪಸಂಖ್ಯಾತರು, ವಲಸಿಗರು ಮತ್ತು ಭದ್ರತಾ ಪಡೆಗಳ ಮೇಲಿನ ಭಯೋತ್ಪಾದಕ ದಾಳಿಗಳನ್ನು ಕಾರ್ಯಗತಗೊಳಿಸಲು ಕಾಶ್ಮೀರದ ಟಿಆರ್‌ಎಫ್ ಭಯೋತ್ಪಾದಕರಿಗೆ ಈ ಶಸ್ತ್ರಾಸ್ತ್ರ ರವಾನೆಗಳನ್ನು ಮತ್ತಷ್ಟು ಪೂರೈಸಲಾಗುತ್ತಿದೆ” ಎಂದು ಅಧಿಕಾರಿ ಹೇಳಿದರು.
ಮರ್ಹೀನ್ ಪ್ರದೇಶದ ನಾಲ್ಕು ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ಕಥುವಾ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ, ದೋಡಾ ಜಿಲ್ಲೆಯ ಖರೋವಾ-ಭಲ್ಲಾದಲ್ಲಿರುವ ಮನೆ ಮತ್ತು ಜಮ್ಮುವಿನ ತಾಲಾಬ್ ಖಟಿಕನ್‌ನಲ್ಲಿ ದಾಳಿ ನಡೆಸಲಾಯಿತು.
ಕಳೆದ ತಿಂಗಳು, ಪೊಲೀಸರು ಎಲ್‌ಇಟಿಯ ಮಾಡ್ಯೂಲ್ ಅನ್ನು ಭೇದಿಸಿ, ಅವರ ನಾಯಕ ಖಟಿಕನ್ ತಲಾಬ್‌ನ ಫೈಸಲ್ ಮುನೀರ್ ಸೇರಿದಂತೆ ಅದರ ಏಳು ಸದಸ್ಯರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮಾಡ್ಯೂಲ್ ಎರಡು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ಕಡೆಯಿಂದ ಡ್ರೋನ್‌ಗಳ ಮೂಲಕ ಕಳುಹಿಸಲಾದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ