ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಇದೀಗ ಬ್ರೇಕ್ ತೆಗೆದುಕೊಂಡಿದೆ. ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಆದರೆ, ನವೆಂಬರ್ 2 ಅಥವಾ 3ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
‘ಅರ್ನಬ್’ ಚಂಡಮಾರುತದ ಎಫೆಕ್ಟ್ ಏನು?
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಅರ್ನಬ್’ ಚಂಡಮಾರುತವು ಇಂದು (ಅ. 27) ರಾತ್ರಿ ಆಂಧ್ರಪ್ರದೇಶದ ಕಾಕಿನಾಡ ಮತ್ತು ಓಂಗಲ್ ನಡುವೆ ಭೂಪ್ರದೇಶಕ್ಕೆ ಅಪ್ಪಳಿಸಲಿದೆ. ಈ ಮುಂಚೆ ಇದು ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದ್ದರೂ, ಈಗ ಕೊಂಚ ನಿರಾಳ ತಂದಿದೆ. ಇದರ ಪ್ರಭಾವದಿಂದಾಗಿ ಉತ್ತರ ಭಾರತದ ಕಡೆಯಿಂದ ಕರ್ನಾಟಕಕ್ಕೆ ಒಣ ಗಾಳಿ ಬೀಸುತ್ತಿದ್ದು, ಹೀಗಾಗಿ ರಾಜ್ಯದಲ್ಲಿ ಸದ್ಯಕ್ಕೆ ಮಳೆಯ ತೀವ್ರತೆ ಗಣನೀಯವಾಗಿ ತಗ್ಗಿದೆ.
ನವೆಂಬರ್ನಲ್ಲಿ ಹಿಂಗಾರು ಮಳೆ ಎಂಟ್ರಿ
ಅರ್ನಬ್ ಚಂಡಮಾರುತದ ಅಬ್ಬರ ಅಕ್ಟೋಬರ್ 30ರ ವೇಳೆಗೆ ಉತ್ತರ ಪ್ರದೇಶ ಹಾಗೂ ನೇಪಾಳ ದಾಟಿ ತಣ್ಣಗಾಗುತ್ತಿದ್ದಂತೆ, ಹವಾಮಾನದಲ್ಲಿ ಮತ್ತೊಂದು ಬದಲಾವಣೆ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ 30 ರಂದು ಉತ್ತರ ಅಂಡಮಾನ್ ಸಮುದ್ರ ತೀರದಲ್ಲಿ ಮತ್ತೊಂದು ಹೊಸ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಇದರ ನೇರ ಪರಿಣಾಮದಿಂದಾಗಿ ನವೆಂಬರ್ 2 ಅಥವಾ 3 ರಿಂದ ಕರ್ನಾಟಕದಲ್ಲಿ ಮತ್ತೆ ಹಿಂಗಾರು ಮಳೆ ಅಧಿಕೃತವಾಗಿ ಚುರುಕುಗೊಳ್ಳಲಿದೆ. ಹೀಗಾಗಿ ಕೃಷಿಕರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇಂದಿನ ಮಳೆ ಮುನ್ಸೂಚನೆ
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಾಳೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಇರಲಿದ್ದು, ಮಳೆ ಸಂಪೂರ್ಣವಾಗಿ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.



