ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಭಾರತದ ಕಾಲಘಟ್ಟಕ್ಕೆ ಸಂಬಂಧಿಸಿದ ಐತಿಹಾಸಿಕ ಸುಳಿವುಗಳಿಗಾಗಿ ನಡೆಯುತ್ತಿರುವ ಸಂಶೋಧನೆಗೆ ಉತ್ತರಾಖಂಡದ ಕಾಶಿಪುರದಲ್ಲಿರುವ ದ್ರೋಣಸಾಗರ ತಾಣವು ಹೊಸ ಸುಳಿವು ನೀಡಿದಂತಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಇಲ್ಲಿ ವ್ಯವಸ್ಥಿತ ಉತ್ಖನನ ಆರಂಭಿಸಿದ್ದು, ಸುಮಾರು 2,000 ವರ್ಷಗಳ ಹಿಂದಿನ ನಾಗರಿಕತೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆಸುತ್ತಿದೆ. ಈ ತಾಣವನ್ನು ಮಹಾಭಾರತದ ಕಾಲಕ್ಕೆ ಸಂಪರ್ಕಿಸುವ ಕೆಲವು ಪುರಾತತ್ವ ಸುಳಿವುಗಳು ಹಿಂದಿನ ಉತ್ಖನನಗಳಲ್ಲಿ ದೊರೆತಿದ್ದು, ಅದರ ನಿಖರ ಹಿನ್ನೆಲೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಅಧ್ಯಯನ ಅಗತ್ಯವಿದೆ ಎನ್ನಲಾಗಿದೆ.
ಹಳೆಯ ಉತ್ಖನನದಲ್ಲಿ ಬೂದು ಬಣ್ಣದ ಮಡಿಕೆಗಳ ಸುಳಿವು
ದ್ರೋಣಸಾಗರದಲ್ಲಿ ಮೊದಲ ಬಾರಿಗೆ 1965ರಲ್ಲಿ ಉತ್ಖನನ ನಡೆಸಲಾಗಿತ್ತು. 1970–71ರಲ್ಲಿಯೂ ಮತ್ತಷ್ಟು ಪರಿಶೋಧನೆ ಕೈಗೊಂಡು ಹಲವು ರಚನೆಗಳನ್ನು ಪತ್ತೆಹಚ್ಚಲಾಗಿತ್ತು. ಇಲ್ಲಿ ದೊರೆತಿರುವ ‘ಪೇಂಟೆಡ್ ಗ್ರೇ ವೇರ್’ (Painted Grey Ware) ಎಂದು ಕರೆಯಲಾಗುವ ಬೂದು ಬಣ್ಣದ ಚಿತ್ರಿತ ಮಡಿಕೆಗಳ ಅವಶೇಷಗಳು ಸಂಶೋಧಕರ ಗಮನ ಸೆಳೆದಿದ್ದು, ಇವುಗಳ ಆಧಾರದಲ್ಲಿ ಕೆಲವು ವಿದ್ವಾಂಸರು ಈ ಪ್ರದೇಶವನ್ನು ಮಹಾಭಾರತದ ಕಾಲಘಟ್ಟದೊಂದಿಗೆ ಸಂಬಂಧಿಸಿದ್ದಾರೆ.
ಇದನ್ನೂ ಓದಿ:
ಎಎಸ್‌ಐ ಡೆಹ್ರಾಡೂನ್ ವೃತ್ತದ ಉಸ್ತುವಾರಿ ಅಧೀಕ್ಷಕ ಪುರಾತತ್ವ ತಜ್ಞ ಡಾ. ಮೋಹನ್ ಚಂದ್ರ ಜೋಶಿ ಅವರ ಪ್ರಕಾರ, ಪ್ರಸ್ತುತ ಉತ್ಖನನದ ಮುಖ್ಯ ಉದ್ದೇಶ ನೆಲದ ನೈಸರ್ಗಿಕ ಪದರದವರೆಗೆ ಪರಿಶೀಲನೆ ನಡೆಸಿ, ಈ ತಾಣದ ಸಾಂಸ್ಕೃತಿಕ ಇತಿಹಾಸದ ವಿವಿಧ ಹಂತಗಳನ್ನು ಗುರುತಿಸುವುದಾಗಿದೆ.
ಇಟ್ಟಿಗೆಯ ಬಾವಿಯೇ? ಸಂಶೋಧಕರ ಪರಿಶೀಲನೆ
ಮಳೆಯ ಅಡಚಣೆಯಿಂದಾಗಿ ಇದುವರೆಗೆ ಸುಮಾರು 20ರಿಂದ 25 ದಿನಗಳಷ್ಟೇ ಉತ್ಖನನ ನಡೆಸಲು ಸಾಧ್ಯವಾಗಿದ್ದು, ಈ ವೇಳೆ ಶುಂಗ–ಕುಷಾಣ ಕಾಲಘಟ್ಟಕ್ಕೆ ಸೇರಿರಬಹುದಾದ ಸಣ್ಣ ಇಟ್ಟಿಗೆ ಹಾಗೂ ವೃತ್ತಾಕಾರದ ಇಟ್ಟಿಗೆಯ ರಚನೆಯೊಂದು ಪತ್ತೆಯಾಗಿದೆ. ಇದನ್ನು ಬಾವಿಯಾಗಿರಬಹುದೆಂದು ತಜ್ಞರು ಪ್ರಾಥಮಿಕವಾಗಿ ಪರಿಶೀಲಿಸುತ್ತಿದ್ದಾರೆ. ಅದರ ಸಂಪೂರ್ಣ ರೂಪ ಮತ್ತು ಮೂಲವನ್ನು ತಿಳಿಯಲು ಇನ್ನಷ್ಟು ಆಳದಲ್ಲಿ ಉತ್ಖನನ ಮುಂದುವರಿಸಬೇಕಾಗಿದೆ ಎಂದು ಪುರಾತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ.



