ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆ ಕೊಂಚ ಬಿಡುವು ಪಡೆದಿದೆ ಅನ್ಕೊಂಡಿದ್ದೀರಾ? ಹಾಗಾದ್ರೆ ಹವಾಮಾನ ಇಲಾಖೆ ನೀಡಿರುವ ಹೊಸ ಮುನ್ಸೂಚನೆ ಗಮನಿಸಿ. ಮುಂಗಾರು ಚಟುವಟಿಕೆ ತುಸು ದುರ್ಬಲವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯ ಸಾಧ್ಯತೆ ಇದೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಮಳೆಯ ಜೊತೆಗೆ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ವರುಣನ ಆಗಮನವಾಗುವ ನಿರೀಕ್ಷೆಯಿದೆ.
ಕರಾವಳಿಯಲ್ಲಿ ಮಳೆ, ಗಾಳಿ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.
ಉತ್ತರ ಕರ್ನಾಟಕದಲ್ಲೂ ಮಳೆ ಸಾಧ್ಯತೆ
ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಗಾಳಿಯ ವೇಗ 30–40 ಕಿ.ಮೀ ತಲುಪುವ ಸಾಧ್ಯತೆಯಿದೆ.
ಆಗಸ್ಟ್ 12ರ ಮಳೆ ಮುನ್ಸೂಚನೆ
ಆಗಸ್ಟ್ 12ರಂದು ಕರಾವಳಿಯಲ್ಲಿ ಮಳೆ ಮುಂದುವರಿಯಲಿದ್ದು, ಒಟ್ಟಾರೆ, ಮುಂದಿನ ಎರಡು ದಿನಗಳಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಒಳನಾಡಿನ ಹಲವು ಜಿಲ್ಲೆಗಳಲ್ಲೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಸೋಮವಾರದ 24 ಗಂಟೆ ಅವಧಿಯಲ್ಲಿ ಸುಬ್ರಹ್ಮಣ್ಯದಲ್ಲಿ 5 ಸೆಂ.ಮೀ, ಮುನಿರಾಬಾದ್‌ನಲ್ಲಿ 4 ಸೆಂ.ಮೀ ಮತ್ತು ಬೆಳ್ತಂಗಡಿಯಲ್ಲಿ 3 ಸೆಂ.ಮೀ ಮಳೆ ದಾಖಲಾಗಿದೆ.



