ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ ಮಳೆ ದಿಢೀರನೆ ನಾಪತ್ತೆಯಾಗಿದೆ. ವರುಣನ ಅಬ್ಬರ ಸಂಪೂರ್ಣವಾಗಿ ಕ್ಷೀಣಿಸಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ, ಅಲ್ಲಲ್ಲಿ ಮೋಡಕವಿದ ವಾತಾವರಣ ಹಾಗೂ ಕೆಲವೆಡೆ ಸಾಧಾರಣ ಮಳೆಯಾಗಬುಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆ.8 ರಂದು ವರುಣ ಕೃಪೆ?
ಕರಾವಳಿಯ ಭಾಗವಾದ ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈಗ ಬಿಸಿಲು ಮತ್ತು ಮೋಡಗಳ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಸೆ. 8 ಅಥವಾ 10 ರಂದು ಈ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.
ಇತ್ತ ಮಲೆನಾಡಿನ ಭಾಗದಲ್ಲೂ ಮಳೆಯ ಅಬ್ಬರ ಕಡಿಮೆಯಾಗಿದೆ. ಕೊಡಗಿನಲ್ಲೂ ಕೇವಲ ತುಂತುರು ಹನಿಗಳ ನಿರೀಕ್ಷೆಯಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದ್ದು, ಸೆ. 16ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ರಾಜ್ಯದ ಒಳನಾಡಿನಲ್ಲೂ ಮಳೆ ಕೊರತೆ
ಇಂದಿನಿಂದ ಎರಡು ದಿನಗಳ ಕಾಲ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾತ್ರ ಸಣ್ಣ ಮಟ್ಟದ ಮಳೆಯಾಗಬಹುದು. ಆದರೆ, ಆ ನಂತರದ ದಿನಗಳಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಲಿದೆ. ಮತ್ತೆ ಸೆ. 14 ರ ಬಳಿಕ ಮೂರು ದಿನಗಳ ಕಾಲ ಅಲ್ಲಲ್ಲಿ ಮಳೆ ಕಾಣಿಸಿಕೊಳ್ಳಬಹುದು.
ಇನ್ನು, ದಕ್ಷಿಣ ಒಳನಾಡಿನ ಭಾಗಗಳಾದ ಮೈಸೂರಿನ ಸುತ್ತಮುತ್ತ ತುಂತುರು ಮಳೆಯಾಗಲಿದ್ದು, ಚಾಮರಾಜನಗರದಲ್ಲಿ ಸಂಜೆ ವೇಳೆಗೆ ಮಿಂಚು-ಗುಡುಗಿನ ಮಳೆಯ ಮುನ್ಸೂಚನೆ ಇದೆ. ಇನ್ನುಳಿದ ಜಿಲ್ಲೆಗಳಲ್ಲಿ ಸೆಕೆ ಹೆಚ್ಚಾಗಲಿದ್ದು, ಸೆ. 13 ಮತ್ತು 14 ರಂದು ಮಾತ್ರ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.
ಹಿಂಗಾರಿನ ನಿರೀಕ್ಷೆಗೆ ‘ಎಲ್ ನಿನೋ’ ಭೀತಿ
ಸದ್ಯದ ಹವಾಮಾನ ವೈಪರೀತ್ಯಕ್ಕೆ ‘ಎಲ್ ನಿನೋ’ ಪ್ರಭಾವವೇ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಇದು ಮುಂಬರುವ ಹಿಂಗಾರು ಮಳೆಯ ಮೇಲೂ ಪರಿಣಾಮ ಬೀರುವ ಭೀತಿ ಎದುರಾಗಿದೆ. ಸದ್ಯಕ್ಕೆ ಮಳೆರಾಯ ಸಂಪೂರ್ಣ ಮುನಿಸಿಕೊಂಡಿರುವುದರಿಂದ, ಬಿತ್ತನೆ ಮಾಡಿ ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿದ್ದ ರೈತರು ದಾರಿ ಕಾಣದೆ ಕಂಗೆಟ್ಟಿದ್ದಾರೆ.



