September 25, 2026
Friday, September 25, 2026
spot_img

‘ವೆಲ್ಕಮ್’ ಖ್ಯಾತಿಯ ಬಾಲಿವುಡ್‌ ಹಿರಿಯ ನಟ ಮುಷ್ತಾಕ್ ಖಾನ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ಹಾಸ್ಯ ಪ್ರದರ್ಶನ ಹಾಗೂ ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಮುಷ್ತಾಕ್ ಖಾನ್ (56) ಅವರು ಗುರುವಾರ ಸಂಜೆ ನಿಧನರಾಗಿದ್ದಾರೆ.

 ಕಳೆದ 15 ದಿನಗಳಿಂದ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಕೊನೆಯ ಹಂತದ ಕ್ಯಾನ್ಸರ್ ತಂದೊಡ್ಡಿದ ಆಪತ್ತು

ಮುಷ್ತಾಕ್ ಖಾನ್ ಅವರ ಬಿಸಿನೆಸ್ ಪಾರ್ಟ್ನರ್ ಶಿವಮ್ ನೀಡಿರುವ ಮಾಹಿತಿಯ ಪ್ರಕಾರ, ಐದು ವರ್ಷಗಳ ಹಿಂದೆಯೇ ಅವರಿಗೆ ಕ್ಯಾನ್ಸರ್ ಪತ್ತೆಯಾಗಿತ್ತು. ಚಿಕಿತ್ಸೆಯ ನಂತರ ಅವರು ಗುಣಮುಖರಾಗಿದ್ದರಾದರೂ, ಕಳೆದ ಎಂಟು ದಿನಗಳ ಹಿಂದೆ ಕಾಯಿಲೆ ಮತ್ತೆ ಉಲ್ಬಣಿಸಿ ಕೊನೆಯ ಹಂತಕ್ಕೆ ತಲುಪಿತ್ತು. ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

 ಅವರ ನಿಧನಕ್ಕೆ ಚಿತ್ರರಂಗದ ಖ್ಯಾತ ಹಾಸ್ಯನಟ ಸುನಿಲ್ ಪಾಲ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

‘ಬಲ್ಲು’ ಪಾತ್ರ ಭಾರೀ ಫೇಮಸ್

2007ರಲ್ಲಿ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ವೆಲ್ಕಮ್’ ನಲ್ಲಿ ಉದಯ್ ಶೆಟ್ಟಿ ಪಕ್ಕದಲ್ಲಿ ಇರುತ್ತಿದ್ದ ‘ಬಲ್ಲು’ ಎಂಬ ಹಾಸ್ಯ ಪಾತ್ರ ಭಾರೀ ಫೇಮಸ್ ಆಗಿತ್ತು.

ಚಿತ್ರರಂಗದ ಸುದೀರ್ಘ ಪಯಣ

1980ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಇವರು, ಹಿರಿಯ ಬರಹಗಾರ ಸಲೀಂ ಖಾನ್ ಅವರ ಶಿಫಾರಸಿನ ಮೇರೆಗೆ ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರನ್ನು ಭೇಟಿಯಾಗಿದ್ದರು. ಆ ನಂತರ ಮಹೇಶ್ ಭಟ್ ನಿರ್ದೇಶನದ ‘ಆಶಿಕಿ’, ‘ದಿಲ್ ಹೈ ಕಿ ಮಾಂತಾ ನಹೀನ್’, ‘ಸಡಕ್’ ಹಾಗೂ ‘ಹಮ್ ಹೈ ರಾಹಿ ಪ್ಯಾರ್ ಕೇ’ ನಂತಹ ಹಲವು ಯಶಸ್ವಿ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದರು. ಅಷ್ಟೇ ಅಲ್ಲದೆ, ಸನ್ನಿ ಡಿಯೋಲ್ ಅಭಿನಯದ ಸೂಪರ್ ಹಿಟ್ ‘ಗದರ್: ಏಕ್ ಪ್ರೇಮ್ ಕಥಾ’ (2001) ಹಾಗೂ ಇತ್ತೀಚಿನ ‘ಗದರ್ 2’ (2023) ಚಿತ್ರಗಳಲ್ಲಿ ‘ಗುಲ್ ಖಾನ್’ (ಗಲ್ಲು) ಎಂಬ ಪಾತ್ರದ ಮೂಲಕ ಜನರ ಮನಸ್ಸು ಗೆದ್ದಿದ್ದರು. ಇತ್ತೀಚಿನ ಹಿಟ್ ಚಿತ್ರಗಳಾದ ‘ಸ್ತ್ರೀ’ (2018) ಮತ್ತು ‘ಸ್ತ್ರೀ 2’ (2024) ನಲ್ಲೂ ಇವರು ನಟಿಸಿದ್ದರು.

ಚಿತ್ರರಂಗ ಮಾತ್ರವಲ್ಲದೆ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಮುಷ್ತಾಕ್ ಖಾನ್ ಅವರು ಪತ್ನಿ ಸಲ್ಮಾ ಖಾನ್ ಹಾಗೂ ಇಬ್ಬರು ಗಂಡು ಮಕ್ಕಳನ್ನು ಒಳಗೊಂಡ ಸುಂದರ ಕುಟುಂಬವನ್ನು ಅಗಲಿದ್ದಾರೆ. ಅವರ ಈ ಹಠಾತ್ ನಿಧನವು ಇಡೀ ಬಾಲಿವುಡ್ ಚಿತ್ರರಂಗಕ್ಕೆ ಭಾರೀ ಆಘಾತವನ್ನು ತಂದಿದೆ.

Must Read