ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಮ್‌ಪುರಹತ್‌ನಲ್ಲಿ ಮಂಗಳವಾರ ಎಂಟು ಮಂದಿಯನ್ನು ಬಲಿತೆಗೆದುಕೊಂಡ ಹಿಂಸಾಚಾರದ ಬಗ್ಗೆ ರಾಜ್ಯಪಾಲ ಜಗದೀಪ್ ಧಂಖರ್ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ ಅವರು, ಭಯಾನಕ ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ಭರಾಟೆ ರಾಮ್‌ಪುರಹತ್ ಬೀರ್ಭುಮ್ ಜಿಲ್ಲೆಯಲ್ಲಿ ತಾಂಡವಾಡುತ್ತಿದೆ. ಹಿಂಸಾಚಾರ ಕಾನೂನುಬಾಹಿರತೆಯ ಹಿಡಿತದಲ್ಲಿದೆ ಎಂದು ಸೂಚಿಸುತ್ತದೆ. ಈಗಾಗಲೇ ಎಂಟು ಜೀವಗಳನ್ನು ಇದು ಬಲಿಪಡೆದುಕೊಂಡಿದೆ ಎಂದು ಹೇಳಿದರು.
ಘಟನೆಯ ಕುರಿತು ತುರ್ತು ಮಾಹಿತಿಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಿಂದ ಕೋರಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತವನ್ನು ತೋರಿಸುತ್ತದೆ. ರಾಜ್ಯವು ಹಿಂಸಾಚಾರ ಮತ್ತು ಕಾನೂನುಬಾಹಿರತೆಯ ಸಂಸ್ಕೃತಿಗೆ ಸಮಾನಾರ್ಥಕವಾಗಲು ಅವಕಾಶ ನೀಡಲಾಗುವುದಿಲ್ಲ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ ಅವರು, ಆಡಳಿತವು ‘ಪಕ್ಷಪಾತದ ಹಿತಾಸಕ್ತಿಗಳಿಗಿಂತ ಮೇಲಕ್ಕೆ ಏರುವ ಅಗತ್ಯವಿದೆ ಇದು ‘ವಾಸ್ತವದಲ್ಲಿ ಪ್ರತಿಫಲಿಸುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಬಿರ್ಭುಮ್ ಜಿಲ್ಲೆಯ ರಾಮ್‌ಪುರಹತ್‌ನಲ್ಲಿ ಮಂಗಳವಾರ ಮುಂಜಾನೆ ಎಂಟು ಜನರು ತಮ್ಮ ಮನೆಗೆ ಬೆಂಕಿ ಹಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕನ ಹತ್ಯೆ ನಡೆದ ಕೆಲವೇ ಗಂಟೆಯೊಳಗೆ ಈ ಘಟನೆ ನಡೆದಿದೆ ಎಂದು ಡಿಜಿಪಿ ಮನೋಜ್ ಮಾಳವೀಯ ಕೋಲ್ಕತ್ತಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸುಟ್ಟ ಮನೆಯೊಂದರಿಂದ ಏಳು ಸುಟ್ಟ ದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಳವಿಯಾ ಹೇಳಿದರು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ನಿನ್ನೆ ರಾತ್ರಿಯಿಂದ ಗ್ರಾಮದಲ್ಲಿ ಪೊಲೀಸ್ ಭದ್ರತೆ ಸ್ಥಾಪಿಸಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ತೃಣಮೂಲ ನಾಯಕ ಭದು ಶೇಖ್ ಅವರ ಮೃತದೇಹ ಸೋಮವಾರ ಪತ್ತೆಯಾದ ನಂತರ ಪ್ರತಿಭಟನೆಗಳು ಪ್ರಾರಂಭವಾದವು ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ನಾಯಕ ಸುವೆಂದು ಅಧಿಕಾರಿ, ಸರಣಿ ಟ್ವೀಟ್‌ಗಳಲ್ಲಿ ಕೇಂದ್ರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ ಮತ್ತು ಪ್ರದೇಶದಲ್ಲಿಭಯೋತ್ಪಾದನೆ ಮತ್ತು ಉದ್ವಿಗ್ನತೆ ಇದೆ ಎಂದು ಆರೋಪಿಸಿದ್ದಾರೆ.