ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್‌ಐಆರ್ ಹೆಸರಲ್ಲಿ ಕೇವಲ ಪಶ್ಚಿಮ ಬಂಗಾಳವನ್ನು ಮಾತ್ರವೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಸ್ವತಃ ಪ್ರಕರಣದಲ್ಲಿ ವಾದಿ ಮಂಡಿಸಿದರು. ಈ ಮೂಲಕ ಖುದ್ದು ಸುಪ್ರೀಂ ಕೋರ್ಟ್ ಗೆ ಹಾಜರಾಗಿ ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಿಸಿದರು.
ಈ ಪ್ರಕರಣ ಸಂಬಂಧ ನಮ್ಮ ವಕೀಲರು ಮೊದಲಿನಿಂದಲೂ ಹೋರಾಡುತ್ತಿದ್ದರು. ಆದರೆ, ಎಲ್ಲವೂ ಮುಗಿದ ನಂತರ ನಮಗೆ ನ್ಯಾಯ ಸಿಗುತ್ತಿಲ್ಲ . ನ್ಯಾಯವು ಮುಚ್ಚಿದ ಬಾಗಿಲಗಳ ಹಿಂದೆ ಕಣ್ಣೀರಿಡುತ್ತಿದೆ. ನಮಗೆ ನ್ಯಾಯ ಸಿಗುವುದಿಲ್ಲವೆಂದು ಖಾತ್ರಿಯಾದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ. ನಾನು ಮುಖ್ಯ ವ್ಯಕ್ತಿಯೇನೂ ಅಲ್ಲ. ಆದರೆ ನನ್ನ ಜನರಿಗಾಗಿ ಹೋರಾಡುತ್ತಿದ್ದೇನೆಯೇ ವಿನಾ ನನ್ನ ಪಕ್ಷಕ್ಕಾಗಿ ಅಲ್ಲ ಎಂದು ತಿಳಿಸಿದರು.
ಎರಡು ವರ್ಷಗಳ ಕಾಲಾವಕಾಶ ಹಿಡಿಯುವ ಪ್ರಕ್ರಿಯೆಯನ್ನು ಎರಡೇ ತಿಂಗಳಲ್ಲಿ ಮಾಡಲು ಬಯಸಿದ್ದರು. ಹಬ್ಬಹರಿದಿನಗಳು, ಸುಗ್ಗಿಯ ದಿನಗಳ ಕಾಲದಲ್ಲಿ ಜನಸಾಮಾನ್ಯರಿಗೆ ಕಿರುಕುಳ ಕೊಡುತ್ತಿದ್ದಾರೆ. ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳವನ್ನು ಮಾತ್ರವೇ ಟಾರ್ಗೆಟ್ ಮಾಡಲಾಗುತ್ತಿದೆ. ಅಸ್ಸಾಂ ಅಥವಾ ಇತರೆ ಈಶಾನ್ಯ ರಾಜ್ಯಗಳನ್ನು ಯಾಕೆ ಈ ಎಸ್.ಐ.ಆರ್.ಗೆ ಗುರಿ ಮಾಡಿಲ್ಲ, ಕೇವಲ ಪಶ್ಚಿಮ ಬಂಗಾಳದ ಮೇಲೆ ಯಾಕೆ ಈ ದ್ವೇಷ ಸಾಧನೆ? ಎಂದು ಮಮತಾ ಪ್ರಶ್ನಿಸಿದರು.
ಇಂದು ಚುನಾವಣಾ ಆಯೋಗ ಯಾವ ರೀತಿ ಇದೆ ಅಂದರೆ ವಾಟ್ಸ್ಯಾಪ್ ನಲ್ಲಿ ನಿರ್ದೇಶನಗಳನ್ನು ನೀಡುವ ವಾಟ್ಸ್ಯಾಪ್ ಆಯೋಗ ಆಗಿ ಹೋಗಿದೆ ಎಂದು ಮಮತಾ ಹೇಳಿದರು.
SIR ಪ್ರಕ್ರಿಯೆ ಮೂಲಕ ಸಣ್ಣ, ಸಣ್ಣ ತಪ್ಪುಗಳಿಗೂ ಮತದಾರರನ್ನು ತೆಗೆದು ಹಾಕಲಾಗುತ್ತಿದೆ ಹೀಗಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದನ್ನು ನಿಲ್ಲಿಸಲು ತುರ್ತು ನಿರ್ದೇಶನಗಳನ್ನು ನೀಡುವ ಅಗತ್ಯವಿದೆ ಎಂದರು.
ಮಮತಾ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ನೀಡಿದೆ.



