57 ಎಸೆತ, 162 ರನ್‌, 13 ಸಿಕ್ಸರ್:‌ ಡೆವಾಲ್ಡ್‌ ಬ್ರೇವಿಸ್‌ ಸಿಡಿಲಬ್ಬರಕ್ಕೆ ದಾಖಲೆಗಳು ಧೂಳಿಪಟ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದಕ್ಷಿಣ ಆಫ್ರಿಕಾದ ಯಂಗ್ ಬ್ಯಾಟಿಂಗ್ ಸೆನ್ಸೇಶನ್ ಡೆವಾಲ್ಡ್ ಬ್ರೇವಿಸ್‌ ಸೌತ್‌ ಆಪ್ರಿಕಾ ಟಿ20 ಚಾಲೆಂಜ್‌ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸಿದ್ದು, ನೈಟ್ಸ್ ತಂಡದ ವಿರುದ್ಧ ಕೇವಲ 57 ಎಸೆತಗಳಲ್ಲಿ 162 ರನ್ ಸಿಡಿಸಿ ಕ್ರಿಕೆಟ್‌ ಜಗತ್ತು ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ.
ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್‌‌ ತಂಡವನ್ನು ಪ್ರತಿನಿಧಿಸುವ 19 ವರ್ಷದ ಆಟಗಾರ ಬೇಬಿ ಎಬಿ ಎಂದೇ ಖ್ಯಾತಿ ಪಡೆದ ಬ್ರೆವಿಸ್ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದರು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಬಳಿಕ ಮತ್ತಷ್ಟು ಆಕ್ರಮಣಕಾರಿಯಾದ ಬ್ರೇವಿಸ್ ಕೇವಲ 35 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಶತಕದ ಬಳಿಕವೂ ಅವರ ಅಬ್ಬರ ಕೊಂಚವೂ ತಗ್ಗಲಿಲ್ಲ. ಅಂತಿಮವಾಗಿ ಕೇವಲ 57 ಎಸೆತಗಳಲ್ಲಿ 162 ರನ್ ಸಿಡಿಸಿ ಬೌಲರ್‌ ಗಳನ್ನು ಕಂಗಾಲಾಗಿಸಿದರು. 284.21 ರ ಸ್ಟ್ರೈಕ್‌ ರೇಟ್‌ ನಲ್ಲಿ ಬ್ಯಾಟ್‌ ಬೀಸಿದ ಬ್ರೇವಿಸ್ ಸಿಡಿಲಬ್ಬರದ ಇನ್ನಿಂಗ್ಸ್‌ ನಲ್ಲಿ 13 ಸಿಕ್ಸರ್‌ ಗಳು ಹಾಗೂ 26 ಬೌಂಡರಿಗಳಿದ್ದವು. ಇದು ಟಿ20 ಕ್ರಿಕೆಟ್‌ ಇತಿಹಾಸದ ಮೂರನೇ ಗರಿಷ್ಠ ಸ್ಕೋರ್ ಆಗಿದೆ. ಆರ್ಸಿಬಿ ತಂಡದ ಪರ ಕ್ರೀಸ್‌ ಗೇಲ್‌ 175*, ಆಸ್ಟ್ರೇಲಿಯಾ ಪರ ಆರೋನ್‌ ಫಿಂಚ್‌ ಸಿಡಿಸಿದ್ದ 172 ರನ್‌ ಗಳ ಬಳಿಕ ಅತಿಹೆಚ್ಚಿನ ಸ್ಕೋರ್‌ ಆಗಿದೆ.
ಜೊತೆಗೆ ದಕ್ಷಿಣ ಆಫ್ರಿಕಾ ದೇಶಿಯ ಕ್ರಿಕೆಟ್‌ ನಲ್ಲಿ ಅತ್ಯಂತ ವೇಗದ ಶತಕವಾಗಿ ದಾಖಲಾಗಿದೆ. ಈ ಹಿಂದೆ ಲೂಟ್ಸ್ ಬಾಸ್ಮನ್ 41 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಬ್ರೇವಿಸ್‌ ಮಿಂಚಿನಾಟದ ಬಲದಿಂದ ಟೈಟಾನ್ಸ್‌ ತಂಡವು ಮೂರು ವಿಕೆಟ್‌ಗಳಿಗೆ 271 ರನ್ ಗಳಿಸಿತು. ಇದು ಟಿ 20 ಯಲ್ಲಿ ನಾಲ್ಕನೇ ಅತ್ಯಧಿಕ ಸ್ಕೋರ್ ಆಗಿದ್ದು, ದೇಶೀಯ ಕ್ರಿಕೆಟ್‌ ನಲ್ಲಿ ಎರಡನೇ ಅತ್ಯಧಿಕ ಮೊತ್ತವಾಗಿದೆ. ಗುರಿ ಬೆನ್ನತ್ತಿದ ನೈಟ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 230 ರನ್ ಕಲೆಹಾಕಿತು. ಈ ಮೂಲಕ ಈ ಪಂದ್ಯದಲ್ಲಿ ಒಟ್ಟು 501 ರನ್‌ಗಳು ಹರಿದುಬಂದವು. ಈ ಹಿಂದೆ 2016 ರಂದು ನ್ಯೂಜಿಲೆಂಡ್‌ನಲ್ಲಿ ಒಟಾಗೊ (249) ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್ಸ್ (248) ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ 497 ರನ್‌ ಸಿಡಿದಿದ್ದು ಅತ್ಯಧಿಕ ಮೊತ್ತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!