ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂತ ಅವಸ್ಥೆ ಮಾರ್ರೆ… ಪೈಸೆ ಕೊಡ್ತೇನೆ ಹೇಳಿದರೂ ಬೊಂಡ ಇಲ್ಲ… ಇಷ್ಟು ವರ್ಷದಲ್ಲಿ ಹೀಗೆ ಒಂದು ತಾಪತ್ರಯ ಬಂದದ್ದು ಇದೇ ಸುರುವಾ ಅಂತ…
ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಾದಿ ಬೀದಿಗಳಲ್ಲಿ ಕೇಳಿಬರುವ ಮಾತುಗಳು. ಹೌದು ಕರಾವಳಿಯಲ್ಲಿ ಈಗ ಎಳನೀರು ಸಿಗುತ್ತಿಲ್ಲ. ಸಾಮಾನ್ಯವಾಗಿ 25ರಿಂದ 30ರೂ.ಗಳಲ್ಲಿ ಸಿಗುತ್ತಿದ್ದ ಒಂದು ಎಳನೀರಿಗೆ ಈಗ ಬರೋಬ್ಬರಿ 70ರೂ.ಗಳಿಗೆ ಏರಿದೆ. ಆದರೂ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಮಾರುಕಟ್ಟೆಯಲ್ಲಿ ಇಲ್ಲ.
ಕರಾವಳಿಯಲ್ಲಿ ಸೆಕೆ ತೀವ್ರಗೊಳ್ಳುತ್ತಿರುವಂತೆ ಎಳನೀರಿಗೆ ಭರ್ಜರಿ ಬೇಡಿಕೆ ಬಂದಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲವಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಊರಿನ ಎಳನೀರು ಹೇಗೂ ಸಿಗುತತಿಲ್ಲ. ಇನ್ನು ಘಟ್ಟ ಪ್ರದೇಶಗಳಿಂದ ಸಾಕಷ್ಟು ಪೂರೈಕೆಯೂ ಇಲ್ಲ. ಮಾರುಕಟ್ಟೆಗೆ ಬರುವ ಎಳನೀರು ಬೆಳಗ್ಗೆ 11 ಗಂಟೆಯಷ್ಟು ಹೊತ್ತಿಗೆ ಎಲ್ಲಾ ಖಾಲಿಯಾಗುತ್ತದೆ ಎನ್ನುತ್ತಾರೆ ಅವರು.