ಬಜೆಟ್​ನಲ್ಲಿ ಕೃಷಿಕರಿಗೆ ಸಿಕ್ಕ ಕೊಡುಗೆಗಳು ಏನೇನು? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ನೀಡಲಾಗುವ ಕಿರು ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮೂರು ಲಕ್ಷ ರೂ ಇದ್ದ ಸಾಲದ ಮಿತಿಯನ್ನು ಐದು ಲಕ್ಷ ರೂಗೆ ಏರಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್​ನಲ್ಲಿ ಈ ಘೋಷಣೆ ಮಾಡಿದ್ದಾರೆ. ಏಳು ಕೋಟಿಗೂ ಹೆಚ್ಚು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವರಿಗೆ ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಬೇಳೆಕಾಳು ಇತ್ಯಾದಿಯಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ ಆರು ವರ್ಷದ ಮಿಷನ್ ಅನ್ನು ಅವರು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಗಳಾದ ಎನ್​ಎಎಫ್​ಇಇ, ಎನ್​ಸಿಸಿಎಫ್ ಇತ್ಯಾದಿ ಸಂಸ್ಥೆಗಳೊಂದಿಗೆ ರೈತರು ಒಪ್ಪಂದ ಮಾಡಿಕೊಂಡು, ಬೇಳೆಕಾಳುಗಳನ್ನು ಮಾರಬಹುದು. ಇದರಿಂದ ರೈತರಿಗೆ ಸುಲಭ ಮಾರುಕಟ್ಟೆ ಸಿಕ್ಕಂತಾಗುತ್ತದೆ.

ಬಜೆಟ್​ನಲ್ಲಿ ಪಿಎಂ ಧನ್ ಧಾನ್ಯ್ ಕೃಷಿ ಯೋಜನೆಯನ್ನು ಪ್ರಕಟಿಸಲಾಗಿದೆ. ಕಡಿಮೆ ಉತ್ಪನ್ನ ಇರುವ 100 ಜಿಲ್ಲೆಗಳನ್ನು ಗುರಿಯಾಗಿಸಿ, ರಾಜ್ಯಗಳ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಬಹುಬೆಳೆ, ಸುಸ್ಥಿರ ಕೃಷಿ ವಿಧಾನ, ನೀರಾವರಿ ಸೌಲಭ್ಯ, ಸಾಲ ಸೌಲಭ್ಯ ಇತ್ಯಾದಿ ಮೂಲಕ ಕೃಷಿ ಉತ್ಪನ್ನವನ್ನು ಹೆಚ್ಚಿಸುವುದು ಈ ಯೋಜನೆ ಗುರಿ. 1.7 ಕೋಟಿ ರೈತರ ಜೀವನಕ್ಕೆ ಇದರಿಂದ ಅನುಕೂಲವಾಗಲಿದೆ.

ಇಂಡಿಯಾ ಪೋಸ್ಟ್ ಸಂಸ್ಥೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಒಂದೂವರೆ ಲಕ್ಷ ಅಂಚೆ ಕಚೇರಿಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಅನುಕೂಲವಾಗಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!