October 16, 2026
Friday, October 16, 2026
spot_img

ಇಂದು ಲೋಕಾಪರ್ಪಣೆಗೊಳ್ಳಲಿರುವ ʼINS ಸಮರ್ಥಕ್ʼ ನೌಕೆಯ ವಿಶೇಷತೆ ಏನು?

ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಇಂದು ಬಹುಪಯೋಗಿ ಯುದ್ಧನೌಕೆ ʼINS ಸಮರ್ಥಕ್ʼ ಲೋಕಾರ್ಪಣೆಗೊಳ್ಳಲಿದೆ.

ಕಾರವಾರ ನೌಕಾ ನೆಲೆಯಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿರುವ ‘INS ಸಮರ್ಥಕ್ʼ ಸಮುದ್ರದಲ್ಲಿ ವಿವಿಧ ಕಾರ್ಯಾಚರಣೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಿರುವ ಬಹುಪಯೋಗಿ ಯುದ್ಧನೌಕೆಯಾಗಿದೆ. ಸರ್ಕಾರದ ಮೇಕ್‌ ಇನ್‌ ಇಂಡಿಯಾ ಉಪಕ್ರಮದ ಅನ್ವಯ ಲಾರ್ಸನ್‌ ಆಂಡ್‌ ಟ್ಯೂಬ್ರೋ ಸಂಸ್ಥೆಯು ಈ ನೌಕೆಯನ್ನು ನಿರ್ಮಾಣ ಮಾಡಿದೆ.

ಸುಮಾರು 3,750 ಟನ್ ತೂಕ ಹೊಂದಿರುವ ಈ ನೌಕೆ ಶೇ. 75 ಕ್ಕಿಂತ ಹೆಚ್ಚು ಸ್ವದೇಶಿ ಸಾಮಾಗ್ರಿಗಳಿಂದ ನಿರ್ಮಿತವಾಗಿದೆ. ವಿಜಯಾರ್ಥಮ್‌ ಒಂದುಷ್ಠಿತತೆ ಎನ್ನುವ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ನೌಕೆಯನ್ನು ಸಾಗರದ ಮೇಲ್ವಿಚಾರಣೆ, ಗಸ್ತು ತಿರುಗುವಿಕೆ, ಮಾನವೀಯ ನೆರವು, ವಿಪತ್ತು ನಿರ್ವಹಣೆ, ತುರ್ತು ಸಂದರ್ಭದಲ್ಲಿ ಆಸ್ಪತ್ರೆ ನೌಕೆಯಾಗಿ ಬಳಕೆ ಮಾಡಬಹುದಾಗಿದೆ.

ಐಎನ್‌ಎಸ್‌ ಸಮರ್ಥಕ್‌ನ ಲಾಂಛನದಲ್ಲಿ ಆಕ್ರಮಣಾಕಾರಿ ಭಾರತೀಯ ಆನೆಯ ಚಿತ್ರವಿದೆ. ಧೈರ್ಯ, ಬಲ, ಬುದ್ಧಿಯನ್ನು ಇದು ಪ್ರತಿಬಿಂಬಿಸುತ್ತದೆ. ಈ ನೌಕೆಯ ಸಿಬ್ಬಂದಿಯನ್ನು ಪ್ರಚಂಡ ಪುಂಡರೀಕರು ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಷ್ಟದಿಗ್ಗಜಗಳಲ್ಲಿ ಪುಂಡರೀಕನೂ ಒಬ್ಬನಾಗಿದ್ದು, ದಕ್ಷಿಣ-ಪೂರ್ವ ದಿಕ್ಕಿನ ರಕ್ಷಕನೆಂದು ಪರಿಗಣಿಸಲಾಗಿದೆ.

ಇದರ ವಿಶೇಷತೆಗಳೇನು?

ಇದು ಯುದ್ಧನೌಕೆಯಷ್ಟೇ ಅಲ್ಲ. ಇಂದಿನ ವೇಗಕ್ಕೆ ಅನುಗುಣವಾಗಿ ಬದಲಾವಣೆ ಮಾಡಬಹುದಾಗಿದೆ. ಸಮುದ್ರದಲ್ಲಿ ಒಂದು ಕೆಲಸಕ್ಕಷ್ಟೇ ಸೀಮಿತವಾಗದೇ ವಿವಿಧ ರೀತಿಯ ಕಾರ್ಯಗಳನ್ನು ಮಾಡುತ್ತದೆ. ಸಮುದ್ರ ಕಣ್ಗಾವಲು ಹಾಗೂ ಗಸ್ತು ಕಾರ್ಯಾಚರಣೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಈ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು, ಗುರಿ ನಿಯೋಜನೆ ಹಾಗೂ ಹಲವು ವ್ಯವಸ್ಥೆಗಳ ಪರಿಶೀಲನೆಯಲ್ಲಿ ಬಳಸಬಹುದಾಗಿದೆ. ಈ ನೌಕೆಯನ್ನು ಮುನ್ನಡೆಸಲು ಮಾನವನ ಅಗತ್ಯ ಇಲ್ಲ. ಇದು ಸ್ವಯಂಚಾಲಿತ ನೌಕೆಯಾಗಿದ್ದು, ಸ್ವಾಯತ್ತ ವ್ಯವಸ್ಥೆಗಳಿಗೆ ತಾಯಿನೌಕೆಯಾಗಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಮಾನವೀಯ ನೆರವು, ವಿಪತ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆ, ಮುಳುಗಿದ ವಸ್ತುಗಳ ಪತ್ತೆ, ಆಸ್ಪತ್ರೆ ನೌಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಸವಾಲಿನ ಸಮುದ್ರ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ವದೇಶಿ ಸಂವೇದಕಗಳು, ಶಸ್ತ್ರಾಸ್ತ್ರಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಬಹುಉದ್ದೇಶದ ಹಾಗೂ ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ ನೌಕೆಯಾಗಿರುವ ಸಮರ್ಥಕ್, ವಿಧ್ವಂಸಕ ನೌಕೆಗಳು, ಯುದ್ಧನೌಕೆಗಳು ಮತ್ತು ವಿಮಾನವಾಹಕ ನೌಕೆಗಳಂತಹ ಪ್ರಮುಖ ಸಮರ ನೌಕೆಗಳನ್ನು ಅವುಗಳ ಮುಖ್ಯ ಕಾರ್ಯಾಚರಣೆಗಳಿಗೆ ಬಳಸಲು ಹೆಚ್ಚಿನ ಅವಕಾಶ ಕಲ್ಪಿಸಲಿದೆ. ಗುರಿ ನಿಯೋಜನೆ, ಸಿಬ್ಬಂದಿ ತರಬೇತಿ, ಸಮುದ್ರ ಕಣ್ಗಾವಲು, ಸರಕು ಸಾಗಣೆ ಹಾಗೂ ಅಗತ್ಯ ನೆರವು ಒದಗಿಸುವ ಕಾರ್ಯಗಳಲ್ಲಿಯೂ ಇದು ಪ್ರಮುಖ ಪಾತ್ರ ವಹಿಸಲಿದೆ.

Must Read