ಆಯನೂರು ಮಂಜುನಾಥ್ ಜನರಿಗೆ ಏನ್ ಸಹಾಯ ಮಾಡಿದಾರೆ? ಸವಾಲ್ ಹಾಕಿದ ಬಿ.ವೈ ರಾಘವೇಂದ್ರ

ಹೊಸದಿಗಂತ ವರದಿ ಶಿವಮೊಗ್ಗ :

ಬಿಜೆಪಿಯಿಂದಲೇ ಲೋಕಸಭೆ, ರಾಜ್ಯಸಭೆ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿಗೂ ಹೋಗಿ ಬಂದಿರುವ ಆಯನೂರು ಮಂಜುನಾಥ ಆಗ ಜನರಿಗೆ ಅನುಕೂಲವಾಗುವಂತಹ ಯಾವ ಒಂದೊಳ್ಳೆ ಕೆಲಸ ಮಾಡಿದ್ದೀರಿ ಎಂದು ತಿಳಿಸಲಿ ಎಂದು ಸಂಸದ ಬಿ.ವೈ. ರಾಘವೇಂದ್ರ ಸವಾಲು ಹಾಕಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಇದ್ದಾಗ ಒಂದು ಮಾತು, ಪಕ್ಷ ಬಿಟ್ಟಾಗ ಇನ್ನೊಂದು ರೀತಿಯ ಮಾತನಾಡುವುದನ್ನು ಅವರು ಬಿಡಬೇಕು. ಕಾಂಗ್ರೆಸ್ ನೀಡಿರುವ ವಕ್ತಾರನ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ, ನಮ್ಮ ನಾಯಕರಾದ ಕೆ.ಎಸ್.ಈಶ್ವರಪ್ಪ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಯಾವ ಕೆಲಸವೂ ಆಗಿಲ್ಲ ಎಂದು ಹೇಳಿರುವುದು ನಿಮಗೆ ಅರಿವಿನ ಕೊರತೆಯಾಗಿದೆ ಎಂದರು.

ವಿಮಾನ ನಿಲ್ದಾಣ, ರೈಲ್ವೆ ಕಾಮಗಾರಿಗಳು, ಆರೋಗ್ಯ ಕ್ಷೇತ್ರದಲ್ಲಿನ ಅಭಿವೃದ್ಧಿ ನಿಮಗೆ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿ ನಿಧಾನವಾಗಿದೆ ನಿಜ. ಆದರೆ ನಿಮಗೆ ತಾಕತ್ತು ಇದ್ದರೆ ಬೇಗ ರಾಜ್ಯ ಸರ್ಕಾರದಿಂದ ಸ್ವಾಧೀನ ಮಾಡಿಸಿ ಕೊಡಿ. ಅತ್ಯಂತ ಕಡಿಮೆ ಅವಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ತೋರಿಸ್ತುತೇನೆ ಎಂದರು.

ಯುಪಿಎ ಸರ್ಕಾರವಿದ್ದಾಗ ಮಲೆನಾಡಿಗೆ ಯಾವ ಯೋಜನೆ ಮಂಜೂರಾಗಿದ್ದವು ಎಂಬುದನ್ನು ಆಯನೂರು ಮಂಜುನಾಥ ಸ್ಪಷ್ಟಪಡಿಸಲಿ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ಕೊಡುವಲ್ಲಿ ಯಾವ ಪಕ್ಷದಿಂದ ವಿಳಂಬವಾಗಿದೆ ಎಂಬುದು ಗೊತ್ತಿದೆ. 60 ರ ದಶಕದಲ್ಲಿ ಮುಳುಗಡೆ ಮಾಡಿ ಈಗ ಹಕ್ಕು ಕೊಡಬೇಕೆಂದು ಒತ್ತಾಯ ಮಾಡುತ್ತೀರಿ. ಇದುವರೆಗೂ ಕಾಂಗ್ರೆಸ್‌ನವರು ಏನು ಮಾಡುತ್ತಿದ್ದರೆಂದು ಪ್ರಶ್ನಿಸಿದರು.

ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಪಕ್ಕ ನಮ್ಮ ಅಪ್ಪನ ಆಸ್ತಿ ಇಲ್ಲ. ಪೆಸಿಟ್ ಕಾಲೇಜು ಬೈಪಾಸ್ ರಸ್ತೆಯ ಬಳಿಯೇ ಆಯನೂರು ಮಂಜುನಾಥ ಅವರ ಫಾರಂ ಇದೆ ಎಂಬುದನ್ನು ಕೇಳಿದ್ದೇನೆ. ಭದ್ರಾವತಿ ವಿಐಎಸ್‌ಎಸ್‌ಎಲ್ ಉಳಿಸಲು ಪ್ರಾಮಾಣಿಕ ಯತ್ನ ಮಾಡಿ ಕೇಂದ್ರ ಯಡಿಯೂರಪ್ಪನವರು ಪತ್ರ ಬರೆದಿದ್ದರಿಂದಾಗಿ ಇದನ್ನು ಮುಚ್ಚುವುದಿಲ್ಲ ಎಂದು ಸಚಿವ ಅಮಿತ್ ಶಾ ಲಿಖಿತವಾಗಿ ಕೊಟ್ಟಿದ್ದಾರೆ. ಎಂಪಿಎಂ ಕಾರ್ಖಾನೆ ಮುಚ್ಚಿದ್ದು ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಎಂಬುದು ನೆನಪಿರಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!