ಹೊಸದಿಗಂತ ವರದಿ ಅಂಕೋಲಾ:
ರೈಲು ಹಳಿಯ ಜಾಯಿಂಟ್ ಜೋಡನೆ ತುಂಡಾದ ಕಾರಣ ಸಂಭವನೀಯ ದುರಂತವೊಂದು ರೈಲ್ವೆ ಟ್ರ್ಯಾಕ್ ಮ್ಯಾನ್ ಅವರ ಸಮಯ ಪ್ರಜ್ಞೆಯಿಂದ ತಪ್ಪಿದ್ದು ಇಲಾಖೆಯ ಸಿಬ್ಬಂದಿಯ ಕಾರ್ಯಕ್ಕೆ ಕೊಂಕಣ ರೈಲ್ವೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹಾರವಾಡ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಜಾಯಿಂಟ್ ತುಂಡಾಗಿತ್ತು ಎನ್ನಲಾಗಿದ್ದು ರೈಲು ಸಂಚರಿಸಿದರೆ ಹಳಿ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು.
ಮಂಗಳವಾರ ಬೆಳಿಗ್ಗಿನ ಜಾವ 4.50 ರ ಸುಮಾರಿಗೆ ಹಾರವಾಡ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಪರೀಕ್ಷೆ ನಡೆಸುತ್ತಿದ್ದ ಟ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರಿಗೆ ರೈಲ್ವೆ ಹಳಿಯ ಜೋಡಣೆ ತುಂಡಾಗಿರುವುದು ಗಮನಕ್ಕೆ ಬಂದಿದ್ದು ಅವರು ಅದನ್ನು ಕೂಡಲೇ ಸ್ಟೇಷನ್ ಮಾಸ್ಟರ್ ಅವರಿಗೆ ತಿಳಿಸಿದ್ದರಿಂದ ಇಲಾಖೆಯ ಅಧಿಕಾರಿಗಳು ಆ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ತಡೆ ಹಿಡಿದು ರೈಲ್ವೆ ಹಳಿಯ ದುರುಸ್ಥಿಗೆ ಕ್ರಮ ಕೈಗೊಂಡಿದ್ದಾರೆ.
ಬೆಳಗಿನ ಜಾವದಲ್ಲಿ ಮಂಗಳೂರು ಮತ್ತು ಮುಂಬೈ ಕಡೆ ಈ ಭಾಗದಿಂದ ವೇಗದೂತ ರೈಲುಗಳ ಸಂಚಾರವಿದ್ದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಆದರೆ ಟ್ರ್ಯಾಕ್ ಮ್ಯಾನ್ ಅವರ ಜಾಗರೂಕತೆಯ ಪರಿಶೀಲನೆ
ಮತ್ತು ಸಮಯ ಪ್ರಜ್ಞೆಯಿಂದ ಅನಾಹುತ ಸಂಭವಿಸುವುದು ತಪ್ಪಿದೆ. ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳು ಹಾರವಾಡಕ್ಕೆ ಆಗಮಿಸಿ ರೈಲ್ವೆ ದುರಂತ ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.