ಏನಿದು ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣ ಪತ್ರ 2023: ಏನಿದರ ವೈಶಿಷ್ಟ್ಯತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2023ರ ಬಜೆಟ್‌ ಘೋಷಣೆಯ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರವನ್ನು ಘೋಷಿಸಿದ್ದರು. ಕೇಂದ್ರ ಹಣಕಾಸು ಸಚಿವಾಲಯವು ಶನಿವಾರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ-2023 ಯೋಜನೆಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಾಗಿದ್ದರೆ ಏನಿದು? ಇದರ ವೈಶಿಷ್ಟ್ಯತೆಗಳೇನು ಎಂಬ ಕುರಿತಾಗಿನ ಚಿಕ್ಕ ಮಾಹಿತಿ ಇಲ್ಲಿದೆ.

ಏನಿದು?
ಹೆಸರೇ ಸೂಚಿಸುವಂತೆ ಇದು ಮಹಿಳೆಯರಿಗಾಗಿಯೇ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಉಳಿತಾಯ ಉಳಿತಾಯ ಯೋಜನೆಯಾಗಿದೆ. ಇದನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ ಸ್ಮರಣಾರ್ಥವಾಗಿ ಘೋಷಿಸಲಾಗಿದ್ದು ದೇಶಾದ್ಯಂತ 1.59 ಲಕ್ಷ ಅಂಚೆ ಕಚೇರಿಗಳಲ್ಲಿ ಈ ಯೋಜನೆ ಲಭ್ಯವಿರಲಿದೆ.

ಈ ಉಳಿತಾಯ ಯೋಜನೆಯ ಅವಧಿಯೆಷ್ಟು?

ಇದು ಎರಡು ವರ್ಷಗಳ ಅಲ್ಪಾವಧಿ ಉಳಿತಾಯ ಯೋಜನೆಯಾಗಿದ್ದು ಏಪ್ರಿಲ್ 2023 ರಿಂದ ಮಾರ್ಚ್ 2025 ರವರೆಗೆ 24 ತಿಂಗಳ ಅವಧಿಯಲ್ಲಿ ಉಳಿತಾಯ ಹಣದ ಮೇಲೆ ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು ಮಾರ್ಚ್ 31, 2025 ರವರೆಗೆ ಎರಡು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.

ಇದರ ಬಡ್ಡಿ ದರವೆಷ್ಟು?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಗರಿಷ್ಟ 2 ಲಕ್ಷ ರೂ. ಮಿತಿಯ ಮೇಲೆ 7.5 ಶೇಕಡಾದಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಇತರ ಬ್ಯಾಂಕ್‌ ಎಫ್‌ಡಿ ಬಡ್ಡಿದರಗಳಿಗೆ ಹೋಲಿಸಿದರೆ ಈ ಬಡ್ಡಿದರವು ಉತ್ತಮವಾಗಿದೆ.

ಇದರ ಪ್ರಯೋಜನ ಪಡೆಯಲು ಏನು ಮಾಡಬೇಕು?
– ಹತ್ತಿರದ ಪೋಸ್ಟ್‌ ಆಫೀಸ್‌ ಅಥವಾ ಈ ಯೋಜನೆಯ ಸೇವೆ ನೀಡುವ ಸ್ಥಳೀಯ ಬ್ಯಾಂಕ್‌ ಗೆ ತೆರಳಿ ಅರ್ಜಿ ಪಡೆದುಕೊಳ್ಳಿ.
– ಅರ್ಜಿಯಲ್ಲಿರುವ ಎಲ್ಲಾ ಮಾಹಿತಿ ತುಂಬಿ ಅಗತ್ಯ ದಾಖಲಾತಿ ಒದಗಿಸಿ
– ನೀವು ಉಳಿತಾಯ ಮಾಡಲು ಬಯಸುವ ಹಣದ ಮೊತ್ತವನ್ನು ನಮೂದಿಸಿ
-ಚೆಕ್ ಅಥವಾ ನಗದು ಮೂಲಕ ಹಣವನ್ನು ಠೇವಣಿ ಮಾಡಿ.
-ನಿಮ್ಮ ಹೂಡಿಕೆಯ ಪುರಾವೆಯಾಗಿ ನಿಮಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!