ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಅವರು ಸುದ್ದಿಯಲ್ಲಿದ್ದಾರೆ. ಆದ್ರೆ ಈ ಬಾರಿ ಸಿನಿಮಾ ವಿಚಾರದಲ್ಲಿ ಅಲ್ಲ. ಬದಲಾಗಿ ಹೊಸ ಪ್ರೊಡಕ್ಷನ್ ಹೌಸ್ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.
ಕೃತಿ ಸನೋನ್ ಈಗ ನಿರ್ಮಾಪಕಿ ಆಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಗೆ ಅವರು ‘ಬ್ಲ್ಯೂ ಬಟರ್ಫ್ಲೈ ಫಿಲ್ಮ್ಸ್’ (Blue Butterfly Films) ಎಂದು ಹೆಸರು ಇಟ್ಟಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸ್ಮರಣೆಗಾಗಿ ಅವರು ಈ ಹೆಸರು ಆಯ್ಕೆ ಮಾಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್, ಕೃತಿ ಸನೋನ್ಗೆ ಆತ್ಮೀಯತೆ ಇತ್ತು. ಇಬ್ಬರೂ ‘ರಾಬ್ತಾ‘ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾದ ಶೂಟಿಂಗ್ ವೇಳೆ ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ ಆ ಬಗ್ಗೆ ಎಂದಿಗೂ ಅವರು ಬಹಿರಂಗವಾಗಿ ಮಾತನಾಡಿರಲಿಲ್ಲ. ಅಗಲಿದ ಗೆಳೆಯನ ಸ್ಮರಣೆಯಲ್ಲೇ ಕೃತಿ ಸನೋನ್ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ಹೆಸರು ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ನೀಲಿ ಬಣ್ಣದ ಚಿಟ್ಟೆಯ (ಬ್ಲ್ಯೂ ಬಟರ್ಫ್ಲೈ) ಎಮೋಜಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಆ ಬಗ್ಗೆ ಅಭಿಮಾನಿಗಳಿಗೆ ಸಖತ್ ಕುತೂಹಲ ಇತ್ತು. ಅದು ತುಂಬ ಮಹತ್ವದ ಎಮೋಜಿ ಎಂದು ಸುಶಾಂತ್ ಸಿಂಗ್ ರಜಪೂತ್ ಅವರು ಹೇಳಿದ್ದರು. ಈಗ ಕೃತಿ ಸನೋನ್ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ‘ಬ್ಲ್ಯೂ ಬಟರ್ಫ್ಲೈ ಫಿಲ್ಮ್ಸ್’ ಎಂದು ಹೆಸರು ಇಟ್ಟಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.