ಆಧಾರ್-ಪ್ಯಾನ್ ಜೋಡಣೆ ಮಾಡದಿದ್ದರೆ ಏನೆಲ್ಲಾ ತೊಂದರೆ ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಧಾರ್-ಪ್ಯಾನ್ ಲಿಂಕ್ ಮಾಡಲು ಇದೇ ತಿಂಗಳ 31 ಕೊನೆಯ ದಿನ. ಇಷ್ಟರೊಳಗೆ ಆಧಾರ್ ಹಾಗೂ ಪ್ಯಾನ್ ಲಿಂಕ್ ಆಗದಿದ್ರೆ ಸಾವಿರ ರೂಪಾಯಿ ದಂಡದೊಂದಿಗೆ ಲಿಂಕ್ ಮಾಡಿಕೊಳ್ಳಬಹುದು. ಆದರೆ ಮಾರ್ಚ್ 31ರ ನಂತರ ಆಧಾರ್- ಪ್ಯಾನ್ ಲಿಂಕ್ ಆಗದಿದ್ದರೆ ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ. ಅಂದರೆ ನಿಮ್ಮ ಬಳಿ ಪ್ಯಾನ್ ಕಾರ್ಡ್, ನಂಬರ್ ಇರುತ್ತದೆ ಆದರೆ ಅದು ಇದ್ದರೂ ಇಲ್ಲದಂತೆ, ಅದನ್ನು ಬಳಸಲು ಸಾಧ್ಯವಾಗುವುದಿಲ್ಲ.

ಸರ್ಕಾರ ದಂಡವಿಲ್ಲದ ಕೊನೆಯ ಗಡುವನ್ನು ಜೂನ್ 30, 2022ಕ್ಕೆ ನಿಗದಿಪಡಿಸಿತ್ತು. ಇದೀಗ ದಂಡದ ಜತೆ ಲಿಂಕ್ ಮಾಡುವ ಅವಧಿಯಲ್ಲಿ ಮಾರ್ಚ್ 31, 2023ರವರೆಗೆ ವಿಸ್ತರಣೆ ಮಾಡಿದೆ.ಏಪ್ರಿಲ್‌ನಲ್ಲಿಯೂ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಲು ಅವಕಾಶ ಇದೆ, ಆದರೆ ಹತ್ತು ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ಗಡುವು ವಿಸ್ತರಣೆ?
ಪ್ಯಾನ್ ಆಧಾರ್ ಲಿಂಕ್‌ಗೆ ಮಾರ್ಚ್ 31, 2022 ಗಡುವು ಆಗಿತ್ತು, ಆದರೆ 500 ರೂಪಾಯಿ ಶುಲ್ಕದೊಂದಿಗೆ ಜೂನ್ 30, 2022 ವರೆಗೆ ವಿಸ್ತರಣೆ ಮಾಡಲಾಗಿತ್ತು. ತದನಂತರ ಒಂದು ಸಾವಿರ ರೂಪಾಯಿ ಶುಲ್ಕದೊಂದಿಗೆ ಮಾರ್ಚ್ 31, 2023 ವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಆದರೆ ಮಾರ್ಚ್31, 2024 ರ ವರೆಗೆ ಗಡುವು ವಿಸ್ತರಣೆ ಎನ್ನುವ ಸಾಧ್ಯತೆ ಬಗ್ಗೆ ಚರ್ಚೆಗಳಾಗುತ್ತಿದೆ. ಗಡುವು ವಿಸ್ತರಣೆಯಾದರೂ ಶುಲ್ಕವೂ ಹೆಚ್ಚಾಗುವ ಕಾರಣ ಆದಷ್ಟು ಬೇಗ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

ಒಂದು ಸಾವಿರ ರೂಪಾಯಿ ಕೊಡೋದಿಲ್ಲ, ಅಥವಾ ಲಿಂಕ್ ಮಾಡೋದಿಲ್ಲ ಎಂದು ನೀವು ಹೇಳುವುದಾದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ?

  • ಮಾರ್ಚ್ 31 ರನಂತರವೂ ಕಾರ್ಡ್ ಲಿಂಕ್ ಮಾಡದೇ ನಿಮ್ಮ ಪ್ಯಾನ್ ನಿಷ್ಟ್ರಿಯ ಆದರೆ ಮತ್ತೆ ನೀವು ಅದನ್ನು ಬಳಸುವಂತಿಲ್ಲ, ಆದರೂ ಬಳಸುವ ಪ್ರಯತ್ನ ಮಾಡಿದರೆ 1000-10,000 ರೂಪಾಯಿವರೆಗೂ ದಂಡ ವಿಧಿಸಲಾಗುತ್ತದೆ.
  • ದಂಡದ ನಂತರವೂ ಪದೇ ಪದೆ ನಿಷ್ಕ್ರಿಯವಾದ ಪ್ಯಾನ್ ಬಳಸಲು ಯತ್ನಿಸಿದರೆ ಜೈಲಿಗೆ ಹೋಗುವ ಸಂಭಾವನೆಯೂ ಇದೆ.
  • ನಿಷ್ಕ್ರಿಯವಾದ ಪ್ಯಾನ್ ಇಟ್ಟುಕೊಂಡು ಐಟಿ ರಿಟರ್ನ್ಸ್ ಸಲ್ಲಿಸುವುದು ಅಸಾಧ್ಯ.
  • ಬಾಕಿ ಇರುವ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳಿಸಲು ಆಗುವುದಿಲ್ಲ. ಜತೆಗೆ ಬಾಕಿ ಇರುವ ರೀಫಂಡ್‌ಗಳೂ ಲಭ್ಯವಾಗುವುದಿಲ್ಲ.
  • ಆಧಾರ್-ಪ್ಯಾನ್ ಲಿಂಕ್ ಆಗದೇ ನೀವು ಬ್ಯಾಂಕ್‌ನಿಂದ ಒಂದು ಬಾರಿಗೆ 5000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ಪಡೆಯಲು ಆಗುವುದಿಲ್ಲ.
  • ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಆಗುವುದಿಲ್ಲ.
  • ಪ್ಯಾನ್- ಆಧಾರ್ ಲಿಂಕ್ ಮಾಡದಿದ್ದರೆ ಶೇ.೨೦ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಅಂದರೆ ಇದೀಗ 10 ಲಕ್ಷ ಆದಾಯಕ್ಕೆ ಶೇ.10 ರಷ್ಟು ಡಿಟಿಎಸ್ ಪಾವತಿಸಬೇಕು, ಆದರೆ ಪ್ಯಾನ್-ಆಧಾರ್ ಜೋಡಣೆ ಆಗದವರು ಶೇ.20ರಷ್ಟು ತೆರಿಗೆ ಪಾವತಿಸಬೇಕಿದೆ.

    ಆಧಾರ್-ಪ್ಯಾನ್ ಜೋಡಣೆ ಆಗಿದ್ಯಾ? ಹೀಗೆ ಚೆಕ್ ಮಾಡಿ

SMS ವಿಧಾನದ ಮೂಲಕ:

  • ನಿಮ್ಮ ಮೊಬೈಲ್‌ ನಲ್ಲಿ “UIDPAN” ಎಂದು ಟೈಪ್‌ ಮಾಡಿ ನಂತರದಲ್ಲಿ ನಿಮ್ಮ 12 ಅಂಕೆಯ ಆಧಾರ್‌ ಸಂಖ್ಯೆ ಹಾಗು ಪಾನ್‌ ಸಂಖ್ಯೆಯನ್ನು ನಮೂದಿಸಿ. ಉದಾ: UIDPAN**************   (* ಇರುವ ಜಾಗದಲ್ಲಿ ನಿಮ್ಮ ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆ ನಮೂದಿಸಿ)
  • ಈ ಟೈಪ್‌ ಮಾಡಿದ ಸಂದೇಶವನ್ನು 56161 ಅಥವಾ 567678 ಗೆ ಕಳುಹಿಸಿ.
  • ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿದೆಯೇ ಎಂಬ ಕುರಿತು ಸಂದೇಶವೊಂದು ಬರುತ್ತದೆ. ಅದರ ಮೂಲಕ ತಿಳಿದುಕೊಳ್ಳಿ (ವಿ.ಸೂ.: ಯಾವುದೇ ಕಾರಣಕ್ಕೂ ಆಧಾರ್‌ ಪಾನ್‌ ಲಿಂಕ್ ಮಾಡುವ ಹೆಸರಿನಲ್ಲಿ ನಕಲಿ ಸಂದೇಶಗಳಿಗೆ ಮೋಸ ಹೋಗಬೇಡಿ)

ಇನ್‌ಕಂ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್ ಮೂಲಕ:

  • incometax.gov.in/iec/foportal ವೆಬ್‌ಸೈಟ್‌ಗೆ ಭೇಟಿ ನೀಡಿ.
  • ʼಕ್ವಿಕ್ ಲಿಂಕ್ಸ್’ ವಿಭಾಗದ ಅಡಿಯಲ್ಲಿ ‘ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಿ
  • ನಿಮ್ಮ ಪ್ಯಾನ್‌ ಸಂಖ್ಯೆ ಮತ್ತು 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ʼView link status’ ಆಯ್ಕೆಮಾಡಿ.
  • ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿದ್ದರೆ ಅಲ್ಲಿ ನಿಮ್ಮ ಆಧಾರ್‌ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ಇಲ್ಲದಿದ್ದರೆ, ನೀವು ಎರಡನ್ನೂ ಲಿಂಕ್ ಮಾಡಬೇಕಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!