ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲು ರೆಡಿಯಾಗಿವೆ.
ಹೀಗಿರುವಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿ ಪಡಿಸಿದೆ. ಹೀಗಾಗಿ ಮಳೆ ಬಂದರೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
ಇದೇ ಭಾನುವಾರ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಒಂದು ವೇಳೆ ಮಳೆರಾಯ ಅಡ್ಡಿಪಡಿಸಿದರೆ, ಮೀಸಲು ದಿನದಂದು ಪಂದ್ಯ ನಡೆಸಲು ತೀರ್ಮಾನಿಸಲಾಗಿದೆ. ಈ ಮೊದಲು ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ವರುಣ ಅಡ್ಡಿಯಾಗಿದ್ದ. ಮಳೆಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಪಂದ್ಯ ಅರ್ಧಕ್ಕೆ ರದ್ದಾಗಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು.
ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯನ್ನು ಹೊರಡಿಸಿದ್ದು, ಸೂಪರ್ 4 ಹಂತದಲ್ಲಿನ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಒಂದು ವೇಳೆ ಸೆಪ್ಟೆಂಬರ್ 10ರಂದು ನಡೆಯಬೇಕಿರುವ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದರೆ, ಸೆಪ್ಟೆಂಬರ್ 11ರಂದು ಪಂದ್ಯ ನಡೆಯಲಿದೆ ಎಂದು ತಿಳಿಸಿದೆ.
ಪಾಕಿಸ್ತಾನ ಮತ್ತು ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಕೇವಲ 2 ದಿನ ಅಂತರವಿದೆ. ಒಂದು ವೇಳೆ ಸೆಪ್ಟೆಂಬರ್ 11ರಂದು ಮೀಸಲು ದಿನದಂದು ಪಂದ್ಯ ನಡೆದರೆ, ಮತ್ತೆ ಮರುದಿನವೇ ಭಾರತ ಶ್ರೀಲಂಕಾ ಎದುರು ಮತ್ತೊಂದು ಪಂದ್ಯ ಆಡಬೇಕಾಗಿ ಬರಬಹುದು. ಏಷ್ಯಾಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 17ರಂದು ನಡೆಯಲಿದೆ.
ಸದ್ಯದ ವರದಿ ಪ್ರಕಾರ ಭಾನುವಾರ ಶೇ.80ರಿಂದ 90ರ ವರೆಗೆ ಮಳೆ ಬೀಳಲಿದೆ. ಅಂದು ಬೆಳಗ್ಗೆ ಶೇ.70ರಷ್ಟು ಮಳೆ ಸಾಧ್ಯತೆಯಿದ್ದು, ಮಧ್ಯಾಹ್ನ ವೇಳೆಗೆ ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.