ಕಾಂಗ್ರೆಸ್​​ ಗೆ ಯಾವ ನೈತಿಕ ಹಕ್ಕಿದೆ ಜಾತ್ಯತೀತತೆ ಬಗ್ಗೆ ಮಾತನಾಡಲು: ಹೆಚ್​​.ಡಿ.ದೇವೇಗೌಡ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್​​ಗೆ ಜಾತ್ಯತೀತತೆ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕ ಹಕ್ಕಿದೆ. ಈ ದೇಶದಲ್ಲಿ ಯಾವುದಾದರೂ ರಾಜಕೀಯ ಪಕ್ಷ ಮಡಿವಂತಿಕೆಯಿಂದ, ನೇರ ಅಥವಾ ಪರೋಕ್ಷವಾಗಿ ಬಿಜೆಪಿ ಜೊತೆ ಸಂಬಂಧವೇ ಇಲ್ಲದೇ ಸ್ವಚ್ಛವಾಗಿ ಇದ್ದೇವೆಂದು ಹೇಳಲಿ. ಯಾವುದಾದರೂ ಒಂದು ಪಕ್ಷ ಇದ್ದರೆ, ನೀವು ಯಾರು ಬೇಕಾದರೂ ನಮ್ಮನ್ನು ಪ್ರಶ್ನೆ ಮಾಡಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​​.ಡಿ.ದೇವೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡುವ ಮುನ್ನವೇ ನಾನು ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಿದ್ದೇನೆ. ಕದ್ದುಮುಚ್ಚಿ ಯಾವುದನ್ನೂ ಮಾತನಾಡಿಲ್ಲ. ಅವರ ಬಳಿ ಮಾತನಾಡುವಾಗ ಕರ್ನಾಟಕದ ಸ್ಥಿತಿಗತಿ ಏನಿದೆ ಎಂಬುದನ್ನು ತಿಳಿಸಿದ್ದೇನೆ. ಅಮಿತ್ ಶಾ ಜೊತೆ ಎಲ್ಲಾ ವಿಚಾರ ಮಾತನಾಡಿದ್ದೇನೆ. ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದರು.

ಕಳೆದ 60 ವರ್ಷಗಳ ನನ್ನ ಹೋರಾಟದಲ್ಲಿ ಯಾವುದೇ ಸಮುದಾಯಕ್ಕೂ ಈ ಪಕ್ಷದಿಂದ ಅನ್ಯಾಯವಾಗಲು ಬಿಟ್ಟಿಲ್ಲ. ಯಾವುದೇ ಸಮುದಾಯ ಇರಲಿ. ಇವತ್ತು ಯಾಕೆ ಹೀಗಾಯ್ತು, ಇದಕ್ಕೆ ಯಾರು ಜವಾಬ್ದಾರರು ಯಾರು? ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರ ತೆಗೆದಿದ್ದು ಯಾರು? 17 ಜನ ಶಾಸಕರನ್ನು ಮುಂಬೈಗೆ ಕಳಿಸಿಕೊಟ್ಟಿದ್ದು ಯಾರು? ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಇದರ ಬಗ್ಗೆ ಚರ್ಚೆ ಮಾಡೋಣ. ಇದಕ್ಕೆಲ್ಲ ಜವಾಬ್ದಾರಿ ಯಾರು? ಎಂದು ಪ್ರಶ್ನಿಸಿದರು.

ಆಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ನಮ್ಮ ಬಳಿ ಬಂದಿದ್ದು ಯಾರು, ಗುಲಾಬ್ ನಬಿ ಆಜಾದ್ ಹಾಗೂ ರಾಜಸ್ಥಾನ ಸಿಎಂ ನಮ್ಮ ಮನೆಗೆ ಬಂದು ನನ್ನನ್ನು ಒತ್ತಾಯ ಮಾಡಿದರು. ಆಗಲೂ ಸಹ ನಿಮ್ಮ ಸಹವಾಸ ಬೇಡ ಅಂತ ಹೇಳಿದೆ. ಆದರೂ, ಒತ್ತಾಯ ಮಾಡಿದರು. ಇವತ್ತು ಬಿಜೆಪಿ ಜೊತೆ ಯಾಕೆ ಸಂಬಂಧ ಬೆಳೆಸಿದ್ದೀರಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಫಾರೂಕ್ ಅಬ್ದುಲ್ಲಾ ಸರ್ಕಾರವನ್ನು ತೆಗೆದಿದ್ದು ಯಾರು, ಬಿಜೆಪಿನಾ, ಕಾಂಗ್ರೆಸ್ಸಾ? ನನ್ನ ಸರ್ಕಾರ 10 ತಿಂಗಳಿತ್ತು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಎಲ್ಲ ಶಾಸಕರ ಜೊತೆ ಚರ್ಚೆ ಮಾಡಿದ ಮೇಲೆ ಕುಮಾರಸ್ವಾಮಿ ಅವರಿಗೆ ಅನುಮತಿ ನೀಡಿದೆ. ಈ ಮೈತ್ರಿಯಿಂದ ಪಕ್ಷಕ್ಕೆ ಏನೂ ತೊಂದರೆ ಇಲ್ಲ, 19 ಮಂದಿ ಶಾಸಕರ ಜೊತೆಯೂ ಚರ್ಚೆ ಮಾಡಿದ್ದೇನೆ ಎಂದರು.

ಕಾಂಗ್ರೆಸ್​ ನಾಯಕ ಎ.ಕೆ. ಆಂಟೋನಿ ಪುತ್ರ ಬಿಜೆಪಿಗೆ ಹೋದರು, ಇದೇ ರೀತಿ ನಾನಾ ವಿಷಯಗಳಿವೆ. ನಾನು ಲಘುವಾಗಿ ಮಾತನಾಡುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಕಾಂಗ್ರೆಸ್ ಸ್ವಾರ್ಥ. ಯಾರ ವ್ಯಕ್ತಿತ್ವನ್ನೂ ಕುಂದಿಸಲು ಈ ದೇವೇಗೌಡ ಹೋಗಲ್ಲ. ಫಾರೂಕ್ ಅಬ್ದುಲ್ಲಾ ಏಕೆ ಹೋದ್ರು, ಸರ್ಕಾರ ತೆಗೆದವರು ಯಾರು? 10 ವರ್ಷ ಆದ ಮೇಲೆ ಲಂಡನ್​ನಿಂದ ಕರೆಸಿ ಚುನಾವಣೆಯಲ್ಲಿ ಗೆಲ್ಲಿಸಿದ್ದು ಯಾರು? ಅವರನ್ನ ಮುಖ್ಯಮಂತ್ರಿ ಮಾಡಿದ್ದು ಯಾರು.. ಒಬ್ಬ ಸಾಮಾನ್ಯ ವ್ಯಕ್ತಿ ನಾನು ಎಂದರು.

ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜೊತೆ ಸರ್ಕಾರ ಮಾಡಿದಾಗ ಮಂಗಳೂರಿನಲ್ಲಿ ಎರಡು ಮುಸ್ಲಿಮರ ಹೆಣ ಬಿತ್ತು. ಕುಮಾರಸ್ವಾಮಿ ಅವರು ಪ್ರವಾಸದಲ್ಲಿದ್ರು. ನಾನು ದೂರವಾಣಿ ಮೂಲಕ ಮಾತನಾಡಿ ಸ್ಥಳಕ್ಕೆ ಹೋಗುವಂತೆ ಹೇಳಿದೆ. ಕುಮಾರಸ್ವಾಮಿಯವರು ಮಂಗಳೂರಿಗೆ ಹೋಗಿ ಹಿಂದು- ಮುಸ್ಲಿಂ ಸಮುದಾಯದ ಮುಖಂಡರ ಸಭೆ ಮಾಡಿದರು. ಆರೋಪಿಗಳಿಗೆ ಶಿಕ್ಷೆ ಕೊಡಿಸಿದರು, ಆಗ ಕುಮಾರಸ್ವಾಮಿ ಸಿಎಂ, ಬಿಜೆಪಿಯವರು ಗೃಹ ಸಚಿವರು. ನಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಎಲ್ಲೂ ಧಕ್ಕೆ ಆಗಲು ಬಿಡುವುದಿಲ್ಲ ಭರವಸೆ ನೀಡಿದರು.

ಕಾಂಗ್ರೆಸ್‌ ಒಂದು ಕುಟುಂಬ ಅಧಿಕಾರ ವಹಿಸಲು ರಾಜಕೀಯ ಮಾಡಿದೆ, ದೇಶದ ಜನ ಮುರ್ಖರಾ? ಗುಲಾಂ ನಬಿ ಆಜಾದ್ ಪಕ್ಷದಿಂದ ಹೊರ ಬಂದರು. ಹಿಂದುತ್ವದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಕಮಲ್ ನಾಥ್ ಏನು ಮಾತಾಡಿದ್ರು. ನಾವು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ನಾವು ಫಾರೂಕ್ ಅವರನ್ನ ರಾಜ್ಯಸಭೆಗೆ ನಿಲ್ಲಿಸಿದ್ದೆವು. ಯಾರು ಅವರನ್ನು ಸೋಲಿಸಿದ್ದು? ದೊಡ್ಡ ನಾಯಕರು? ನಾನೀಗ ಅವರ ಹೆಸರು ತೆಗೆದುಕೊಳ್ಳಲ್ಲ, 8 ನಾಯಕರು, ಮಂಡ್ಯದ ದೊಡ್ಡ ನಾಯಕರು, ಅವರು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ನಮ್ಮದು ಜಾತ್ಯತೀತ ಪಕ್ಷ. ನಾನು ಇಂತಹ ನೂರು ಉದಾಹರಣೆ ಕೊಡಬಲ್ಲೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ ನಾಗಾಲೋಟಕ್ಕೆ ಬ್ರೇಕ್ ಹಾಕ್ತಿರಾ ಎಂಬ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ದೇವೇಗೌಡರು, ಎಲ್ಲಿದೆ ರಿ ನಾಗಾಲೋಟ.? ನಾಗಾಲೋಟದಂತೆ ಕಾವೇರಿ ನೀರು ಓಡ್ತಿದೆ.. ಓಡ್ತಿದೆ.. ಓಡ್ತಿದೆ. ನಮ್ಮ ಜಲಸಂಪನ್ಮೂಲ ಸಚಿವರು ಖುಷಿಯಾಗಿದ್ದಾರೆ. ಅವರಿಗೆ ಸ್ಟಾಲಿನ್ ಗೆಲ್ಲಬೇಕು. ನನ್ನ ರಾಜ್ಯದ ಮರಣ ಶಾಸನಕ್ಕೆ ನಾನು ಬಿಡುವುದಿಲ್ಲ ಎಂದು ಗುಡುಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!