ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಮಗನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾಗುವಷ್ಟರಲ್ಲಿ ಅಡಿವೆಪ್ಪ ಹೆಣವಾಗಿದ್ದನ್ನು ಕಂಡು ಆತನ ಮನೆಯವರು ಕಕ್ಕಾಬಿಕ್ಕಿಯಾಗಿದ್ದರು. ಆದರೆ, ಅಡಿವೆಪ್ಪನ ಮಗ ಶಿವಯೋಗಿ ತನಗೇನೂ ಸಂಬಂಧವಿಲ್ಲ, ಅಮಾಯಕ ಎನ್ನುವ ರೀತಿಯಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಎನ್ನಲಾಗಿದೆ.
ಶಿವಯೋಗಿ ಅದೇ ಗ್ರಾಮದಲ್ಲಿ ಅಕ್ರಮ ಸಂಬಂಧವೊಂದನ್ನು ಇಟ್ಟುಕೊಂಡಿದ್ದ. ಇದಕ್ಕೆ ಅಡಿವೆಪ್ಪ ವಿರೋಧ ವ್ಯಕ್ತಪಡಿಸಿ ತನ್ನ ಮಗನ ಜೀವನ ಚೆನ್ನಾಗಿರಲಿ ಎಂದು ಕನ್ಯೆ ನೋಡುವ ಶಾಸ್ತ್ರ ಕೂಡ ಇಟ್ಟುಕೊಂಡಿದ್ದ. ಅಡಿವೆಪ್ಪನ ಹತ್ಯೆಯಾಗುವ ಹಿಂದಿನ ರಾತ್ರಿ ಇದೇ ವಿಷಯಕ್ಕೆ ಮನೆಯಲ್ಲಿ ಮಗನೊಂದಿಗೆ ಜಗಳ ಕೂಡ ನಡೆದಿತ್ತಂತೆ.
ಅದಾದ ಬಳಿಕ ಅಡಿವೆಪ್ಪ ತನ್ನ ಮನೆಯ ಪಕ್ಕವೇ ಇದ್ದ ಶೆಡ್‌ನಲ್ಲಿ ಮಲಗಿಕೊಂಡಿದ್ದ. ಎಲ್ಲಿ ತನ್ನ ಅಕ್ರಮ ಸಂಬಂಧಕ್ಕೆ ತಂದೆ ಮುಳುವಾಗುತ್ತಾನೋ ಎಂದು ಮಗನೇ ತನ್ನ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.