ತರಾತುರಿ ಅರಣ್ಯ ನಾಶ ಮಾಡುವ ಪರಿಸ್ಥಿತಿ ಏನಿತ್ತು?: ತೆಲಂಗಾಣ ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಪಕ್ಕ ಕಂಚ ಗಚ್ಚಿಬೌಲಿಯ ಸುಮಾರು 400 ಎಕರೆಗಳನ್ನು ಪುನರಾಭಿವೃದ್ಧಿ ಮಾಡಲು ಅಧಿಕಾರಿಗಳ ಅನುಮತಿಯಿಲ್ಲದೆ ಆತುರಾತುರವಾಗಿ ಅರಣ್ಯ ನಾಶ ಮಾಡಿರುವುದರ ಕುರಿತು ಬುಧವಾರ ಸುಪ್ರೀಂ ಕೋರ್ಟ್ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠ, ಹೈದರಾಬಾದ್‌ನ ಕಂಚ ಗಚ್ಚಿಬೌಲಿಯ ಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದ ಪಕ್ಕದಲ್ಲಿರುವ ಸುಮಾರು 100 ಎಕರೆ ಅರಣ್ಯವನ್ನು ಅಧಿಕಾರಿಗಳ ಅನುಮತಿಯಿಲ್ಲದೆ ನಾಶ ಮಾಡಲಾಗುತ್ತಿದೆ. ಇಲ್ಲಿ ಏನಾದರೂ ನಿರ್ಮಾಣ ಕಾರ್ಯ ನಡೆಸಬೇಕಿದ್ದರೆ ಮೊದಲು ಅನುಮತಿಯನ್ನು ಪಡೆಯಬೇಕಿತ್ತು ಎಂದು ಹೇಳಿದೆ.

ಈ ಅರಣ್ಯದೊಳಗೆ ಇದ್ದ ಪ್ರಾಣಿಗಳು ಆಶ್ರಯಕ್ಕಾಗಿ ಓಡಾಡುತ್ತಿವೆ. ಬೀದಿ ನಾಯಿಗಳಿಂದ ಕಚ್ಚಲ್ಪಡುತ್ತಿವೆ ಎಂದು ನ್ಯಾಯಾಧೀಶರು ವಿಡಿಯೋ ಸಹಿತ ಪ್ರಸ್ತುತಪಡಿಸಿ, ತೊಂದರೆಗೊಳಗಾದ ಪ್ರಾಣಿಗಳ ಪರವಾಗಿ ವಾದ ಮಂಡಿಸಿದರು.

ರಾಜ್ಯದ ವನ್ಯಜೀವಿ ವಿಭಾಗಗಳಿಗೆ ಪ್ರಾಣಿಗಳನ್ನು ರಕ್ಷಿಸುವಂತೆ ಆದೇಶಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿತು.

ಮುಖ್ಯ ಕಾರ್ಯದರ್ಶಿಯನ್ನು ಉಳಿಸಲು ಬಯಸಿದರೆ ಆ 100 ಎಕರೆಗಳನ್ನು ಹೇಗೆ ಪುನಃ ಸ್ಥಾಪಿಸುತ್ತೀರಿ ಎಂದು ತಿಳಿಸಿ. ಒಂದು ಯೋಜನೆಯನ್ನು ರೂಪಿಸಿ. ಇಲ್ಲದಿದ್ದರೆ ಎಷ್ಟು ಅಧಿಕಾರಿಗಳು ತಾತ್ಕಾಲಿಕವಾಗಿ ಜೈಲಿಗೆ ಹೋಗುತ್ತಾರೆಂದು ನಮಗೆ ತಿಳಿದಿಲ್ಲ. ಮೂರು ದಿನಗಳ ರಜಾ ಸಂದರ್ಭದಲ್ಲಿ ಇದನ್ನು ಮಾಡುವ ತುರ್ತು ಪರಿಸ್ಥಿತಿ ಏನಿತ್ತು ಎಂದು ನ್ಯಾಯಮೂರ್ತಿ ಗವಾಯಿ ಪ್ರಶ್ನಿಸಿದ್ದಾರೆ.

1996ರ ಆದೇಶವನ್ನು ತೆಲಂಗಾಣ ಸರ್ಕಾರ ಹೇಗೆ ನಿರ್ಲಕ್ಷಿಸಿತು ಎಂದು ಪ್ರಶ್ನಿಸಿರುವ ನ್ಯಾಯಾಲಯ ಇದರಲ್ಲಿ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಈ ಪ್ರದೇಶದಲ್ಲಿ ವನ್ಯಜೀವಿಗಳು, ಪರಿಸರದ ರಕ್ಷಣೆ ಮತ್ತು ಪ್ರದೇಶದ ಸಮತೋಲನವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಕಾಡುಗಳಲ್ಲಿನ ಮರಗಳನ್ನು ಕಡಿಯಲು ಮಾರ್ಗಸೂಚಿಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗಿತ್ತು ಎಂದು ಹೇಳಿದೆ.

ವಿಶ್ವವಿದ್ಯಾಲಯದ ಪಕ್ಕದಲ್ಲಿರುವ 400 ಎಕರೆಗಳ ಸುತ್ತಲೂ ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್ ಯೋಜನೆಗೆ ವಿದ್ಯಾರ್ಥಿಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಇಲ್ಲಿ ಬುಲ್ಡೋಜರ್‌ಗಳ ಬಳಕೆಯು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತದೆ ಮತ್ತು ಈ ಪ್ರದೇಶದಲ್ಲಿನ ವನ್ಯಜೀವಿಗಳಿಗೆ ಅಪಾಯ ಉಂಟು ಮಾಡುತ್ತದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!