ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಕಾಶ್ ರಾಜ್ ಮತ್ತೊಮ್ಮೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಕಾಶ್ ರಾಜ್ (Prakash Raj) ಪ್ರಶ್ನಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ? ಅಸ್ಪೃಶ್ಯತೆ ಹೋಗಬೇಕೋ ಬೇಡವೋ? ಅವರ ಹೇಳಿಕೆಯನ್ನು ತಿರುಚಲಾಗಿದೆ. ಜಾತಿ ವಿವಾದ ಹುಟ್ಟು ಹಾಕುತ್ತಿರುವವರಿಗೆ ಕೆಲಸ ಇಲ್ಲವಲ್ಲ, ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸನಾತನ ಧರ್ಮ ಎಂದರೆ ಏನು? ನಾನು ಬದಲಾಗುವುದಿಲ್ಲ ಎನ್ನುವುದು ಪ್ರಕೃತಿಗೆ ವಿರುದ್ಧ, ಕೆಲವರು ನಾನೇ ಶ್ರೇಷ್ಠ ಎನ್ನುತ್ತಾರೆ. ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದುಗಳಲ್ಲಾ, ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಮಾವಾಸ್ಯೆ ಎಂದರೆ ಚೆನ್ನಾಗಿಲ್ವಂತೆ, ಆದರೆ ಚಂದ್ರಯಾನ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದ್ದಾರೆ.
ಎಲ್ಲಾ ಧರ್ಮಗಳು ವಿಕಾರ ಇದೆ. ಧರ್ಮಯುದ್ಧ ಯಾವಾಗ ಮುಗಿಯುತ್ತೆ ಎನ್ನುವುದು ಗೊತ್ತಾಗಲ್ಲ. ಧರ್ಮ ಯುದ್ಧ ಕಾಳ್ಗಿಚ್ಚು ಇದ್ದಂತೆ. ಮೂಲವೂ ಗೊತ್ತಾಗಲ್ಲಾ ಅಂತ್ಯವೂ ಗೊತ್ತಾಗಲ್ಲಾ. ಹಿಂದೆ ರಾಜರಕಾಲದಲ್ಲಿ ರಾಜರ ಜತೆ ಕೆಲಸ ಮಾಡುವವರಿಗೆ ಕೆಲವೊಮ್ಮೆ ಸಂಬಳ ಕೊಡಲು ಆಗುತ್ತಿರಲಿಲ್ಲ. ಆಗ ಆ ಸೈನಿಕರು ಲೂಟಿ, ಅತ್ಯಾಚಾರ, ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇಂತಹವರನ್ನೇ ರಾಜಕಿಯದಲ್ಲೂ ಬಳಸಿಕೊಳ್ಳುತ್ತಿದ್ದಾರೆ. ರೌಡಿಗಳನ್ನು ರಾಜಕೀಯಕ್ಕೆ ಯಾಕೆ ಸೇರಿಸಿಕೊಳ್ಳುತ್ತೀರಾ? ಅಂತವರನ್ಮೇ ಎಂಪಿ ಮಾಡ್ತೀರಿ ಎಂದು ಪ್ರಶ್ನಿಸಿದರು.