ಕೋರ್ಟ್ ತೀರ್ಪು ಏನೇ ನೀಡಿದರು ಸರ್ಕಾರ-ಸಾರ್ವಜನಿಕರು ಸ್ವಾಗತಿಸಿ ಕಟ್ಟುನಿಟ್ಟಾಗಿ ಪಾಲಿಸಬೇಕು: ಪರಿಷತ್ ಸಭಾಪತಿ ಹೊರಟ್ಟಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ತೀರ್ಪು ಏನೇ ನೀಡಿದರು ಸರ್ಕಾರ ಮತ್ತು ಸಾರ್ವಜನಿಕರು ಸ್ವಾಗತಿಸಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹತ್ತನೇ ತರಗತಿವರೆಗೆ ಈಗಾಗಲೇ ಸಮವಸ್ತ್ರವಿದೆ. ಆದರೆ ಕಾಲೇಜಿಗೆ ಸಮವಸ್ತ್ರವಿಲ್ಲ. ಹಾಗಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳುವುದು ಎಂಬುದನ್ನು ಕಾದು ನೋಡಬೇಕು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಶಾಲೆಗಳಲ್ಲಿ ಯಾರೂ ಬಣ್ಣದ ಬಟ್ಟೆಗಳನ್ನು ಧರಿಸದಿರುವಂತೆ ಮಧ್ಯಂತರ ಆದೇಶ ನೀಡಿದೆ ಎಂದರು.
ಸಮವಸ್ತ್ರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಇದನ್ನು ಸದನದಲ್ಲಿ ಚರ್ಚೆ ಮಾಡೋಕ್ಕೆ ಬರುವುದಿಲ್ಲ. ನ್ಯಾಯಾಲಯ ತೀರ್ಪು ಕೊಟ್ಟ ನಂತರ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ತಿಳಿಸಿದರು.
ಹಿಜಾಬ್ ವಿವಾದ ಕೆಲವರ ಹಿಡನ್ ಅಜೆಂಡ್ ಆಗಿರಬಹುದು. ಈಗಾಗಲೇ ಹಿಜಾಬ್ ವಿವಾದ ಸೃಷ್ಟಿ ಕೆಲ ವಿದ್ಯಾರ್ಥಿನಿಯರ ಹಿಡನ್ ಅಜೆಂಡಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಆ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ದುಷ್ಟ ಶಕ್ತಿಗಳು ಯಾವಾಗಲೂ ಸಮಾಜದಲ್ಲಿ ಘಾತುಕ ಕೆಲಸಗಳನ್ನೇ ಮಾಡುತ್ತವೆ. ಕೆಲವರಿಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದೇ ಕೆಲಸವಾಗಿ ಬಿಟ್ಟಿದೆ ಎಂದು ಹೇಳಿದರು.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜಘಾತುಕರು ಯಾವುದೇ ಜಾತಿ, ಧರ್ಮ ಇರಲಿ ಅಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಜಾಬ್ ವಿವಾದವನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಇದರಿಂದ ಮುಂದೆ ಏನೋ ಅನಾಹುತ ಆಗುತ್ತೆ ಎಂಬುದನ್ನು ಎಲ್ಲ ಪಕ್ಷಗಳು ತಿಳಿಯಬೇಕು. ಈ ಸಂದರ್ಭವನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆದರಿಂದ ರಾಜ್ಯದ ಮುಖ್ಯಮಂತ್ರಿಗಳು ಎಲ್ಲರ ಜೊತೆಗೆ ಚರ್ಚಿಸಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕು. ಅದನ್ನು ಬಿಟ್ಟು ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಕೆಲವು ಸ್ನೇಹಿತರು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದು ನಿಜ. ಇನ್ನೂ ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಸಲಹೆ ನೀಡಿದ್ದಾರೆ. ಆದರಿಂದ ಇನ್ನೂ ಚುನಾವಣೆಗೆ ಸಾಕಷ್ಟು ಸಮಯಾವಕಾಶ ಇದೆ. ಬಜೆಟ್ ಅಧಿವೇಶನ ನಂತರ ಮುಂದಿನ ತಿರ್ಮಾಣ ಕೈಗೊಳ್ಳುತ್ತೇನೆ ಎಂದರು. ಸದ್ಯಕ್ಕೆ ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ. ಅಲ್ಲದೇ ನಾನು ಬಿಜೆಪಿಗೆ ಸೇರುವ ಕುರಿತು ಎಲ್ಲೂ ಮಾತನಾಡಿಲ್ಲ. ಶಿಕ್ಷಕರ ಕ್ಷೇತ್ರಕ್ಕೆ ಆಯಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಇನ್ನೂ ಮೇ ತಿಂಗಳಲ್ಲಿ ಚುನಾವಣೆ ಇದೆ. ನನ್ನ ಚುನಾವಣೆ ವಿಚಾರದಲ್ಲಿ ಯಾವುದೇ ಜಾತಿ ಪ್ರಶ್ನೆ ಬರಲ್ಲ. ಶಿಕ್ಷಕರ ಬೆಂಬಲ ನನಗಿದೆ. ಹಾಗಾಗಿ ಯಾವ ಪಕ್ಷಕ್ಕೂ ಹೋಗಬೇಕೆಂಬುದಿಲ್ಲ ಎಂದರು.
ಮತಾಂತರ ನಿಷೇಧ ಕಾಯಿದೆ ಬಜೆಟ್ ಅಧಿವೇಶನದಲ್ಲಿ ಪರಿಷತ್ ನಲ್ಲಿ ಮಂಡನೆ ಅನ್ನೋ ವಿಚಾರವಾಗಿ ಮಾತನಾಡಿದ ಹೊರಟ್ಟಿ ಅವರು, ಯಾವ ಯಾವ ಮಸೂದೆಗಳು ಮಂಡನೆಯಾಗುತ್ತೆ ಅನ್ನೋದರ ಬಗ್ಗೆ ಇದೀಗ ಮಾಹಿತಿಯಿಲ್ಲ. ಪರಿಷತ್ ನಲ್ಲಿ ಮಂಡನೆ ಆದರೆ ನೆಟ್ ಟೂ ನೆಟ್ ಫೈಟ್ ಇದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!