ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದ್ದು, ಹಬ್ಬಕ್ಕೆ ಪಟಾಕಿ ಸಿಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.
ನವೆಂಬರ್ 11 ರಿಂದ 15 ರವರೆಗೂ ದೀಪಾವಳಿಯನ್ನು ಆಚರಿಸಲಾಗುತ್ತದೆ, ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯವಾಗಿದೆ. ದೀಪಾವಳಿಯ ಹಬ್ಬದ ದಿನಗಳಂದು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಪಟಾಕಿ ಸಿಡಿಸಬಹುದಾಗಿದೆ.
ಈ ಸಮಯವನ್ನು ಹೊರತುಪಡಿಸಿ ಮತ್ಯಾವ ಸಮಯದಲ್ಲಿಯೂ ಪಟಾಕಿ ಸಿಡಿಸುವಂತಿಲ್ಲ. ಪಟಾಕಿ ಹಚ್ಚುವುದರಿಂದ ಶಬ್ದ ಹಾಗೂ ವಾಯು ಮಾಲೀನ್ಯ ಉಂಟಾಗುತ್ತದೆ, ಇನ್ನು ಒಂದು ದಿನದ ಆಚರಣೆಯಿಂದ ಗಾಳಿ ಮಲಿನವಾಗುತ್ತದೆ. ಈ ಕಾರಣದಿಂದಾಗಿ ಗೈಡ್‌ಲೈನ್ಸ್ ರಿಲೀಸ್ ಮಾಡಿದ್ದು, 10 ಗಂಟೆ ನಂತರ ಪಟಾಕಿ ಹೊಡೆಯಲು ಅವಕಾಶ ಇಲ್ಲ.
ಹಸಿರು ಪಟಾಕಿ ಬಿಟ್ಟು, ನಿಷೇಧಿತ ಪಟಾಕಿಗಳನ್ನು ಯಾರೂ ಮಾರುವಂತಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗ್ನಿಶಾಮಕ ಪಡೆ ಅಧಿಕಾರಿ, ಸ್ಥಳೀಯ ಆರೋಗ್ಯಾಧಿಕಾರಿಗಳು, ನಾಗರಿಕರ ತಂಡವೊಂದನ್ನು ರಚಿಸಿ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
ನಿಷೇಧಿತ ಪಟಾಕಿ ಮಾರಾಟ ಮಾಡುತ್ತಿದ್ದರೆ ಗೋದಾಮಿಗೆ ಮುತ್ತಿಗೆ ಹಾಕಬಹುದು, ಇನ್ನು ಅಕ್ರಮವಾಗಿ ಮಾರಾಟ ಕಂಡುವಂದರೆ ಕ್ರಿಮಿನಲ್ ಕೇಸ್ ದಾಖಲಿಸಬಹುದು. ಹಸಿರು ಪಟಾಕಿಗಳನ್ನು ಸಿಡಿಸಬಹುದು, ಆದರೆ ಈ ವೇಳೆ ಯಾವುದೇ ಪ್ರಾಣಿ, ಪಕ್ಷಿ, ವಯಸ್ಸಾದವರು, ಮಕ್ಕಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಇನ್ನು ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲೂ ಪಟಾಕಿ ಸಿಡಿಸುವಂತಿಲ್ಲ ಎನ್ನಲಾಗಿದೆ.