ಹೊಸ ದಿಗಂತ ವರದಿ, ಶಿರಸಿ:
ರಾಜ್ಯದಲ್ಲಿ ದಲಿತ ಸಿ.ಎಂ ಮಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ ಕಾಲ ಬಂದಾಗ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದಲಿತ ಸಿಎಂ ಮಾಡುವ ಬಗ್ಗೆ ಪಾರ್ಟಿಗೆ ನಮ್ಮ ನಿರ್ಧಾರ ಹೇಳಬಹುದು. ಅಷ್ಟೇ ನಿರ್ಧಾರ ಹೈಕಮಾಂಡ್ ಮಾಡಬೇಕು. ಸದ್ಯಕ್ಕೆ ದಲಿತ ಸಿಎಂ ಇಲ್ಲ, ಪಾರ್ಟಿ ಸಾಮಾನ್ಯ ಕಾರ್ಯಕರ್ತ ನಾಗಿರಬೇಕು ಅಷ್ಟೇ ,ದಲಿತ ,ಆಜಾತಿ ಈ ಜಾತಿ ಎನ್ನುವುದಿಲ್ಲ, ನನಗೆ ಪಕ್ಷದ ಮೇಲೆ ಯಾವುದೇ ಅಸಮದಾನ ಇಲ್ಲ ಎಂದರು.
ಇನ್ನು ಬಿಕೆ ಹರಿಪ್ರಸಾದ್ ರವರನ್ನು ಪಕ್ಷ ಕಡಗಣನೆ ಕುರಿತು ಮಾತನಾಡಿದ ಅವರು, ಪಕ್ಷ ಕಡಗಣನೆ ಮಾಡುವ ಪ್ರಶ್ನೆಯೇ ಇಲ್ಲ,ಅವರನ್ನು ಯಾರೂ ಕೆಳಗಿಳಿಸುವ ಪ್ರಶ್ನೆ ಇಲ್ಲ,ನಾವು ಅವರ ಜೊತೆ ಚರ್ಚೆ ಮಾಡಿದ್ದೇವೆ. ಬಹಳಷ್ಟು ಹಿರಿಯ ನಾಯಕರಿಗೆ ಸ್ಥಾನ ನೀಡಿಲ್ಲ, ಅವಕಾಶ ಬಂದಾಗ ಅವರಿಗೆ ಸ್ಥಾನಮಾನ ನೀಡುತ್ತಾರೆ. ಇನ್ನು ನಿಗಮ ಮಂಡಳಿಗೆ 25 ಜನ ಶಾಸಕರಿಗೆ ಸ್ಥಾನ ನೀಡುತಿದ್ದಾರೆ. ಚುನಾವಣೆ ಮುಗಿದ ನಂತರ ಇನ್ನಷ್ಟು ಜನರಿಗೆ ನೀಡುತ್ತಾರೆ. ಎಲ್ಲರಿಗೂ ಸಮಾಧಾನ ಮಾಡಲು ಅವಕಾಶ ಇದೆ,ಅಸಮದಾನ ಆಗುವ ಪ್ರಶ್ನೆ ಇಲ್ಲ ಎಂದರು.
ಇನ್ನು ಗುತ್ತಿಗೆದಾರರಿಗೆ ಪ್ರಾಮುಖ್ಯತೆ ಮೇಲೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇವೆ. ಹಿಂದಿನ ಸರ್ಕಾರ ಅನುದಾನಕ್ಕಿಂತ ಹೆಚ್ಚಿಗೆ ಕಾಮಗಾರಿ ಮಂಜೂರು ಮಾಡಿದ್ದರಿಂದ ಸಮಸ್ಯೆಯಾಗಿದೆ.ಸಾವಿರದ ಐವತ್ತೈದು ಕೋಟಿ ಅನುದಾನ ಇರುವುದು ಹಿಂದಿನ ಸರ್ಕಾರ ಎರಡು ಪಟ್ಟು ಜಾಸ್ತಿ ನೀಡಿದ್ದಾರೆ. ಅದೇ ಬ್ಯಾಲೆನ್ಸ್ ಆಗಿದೆ ಅದನ್ನು ಬೇಗ ಕೊಡಲು ಪ್ರಯತ್ನ ಮಾಡುತ್ತೇವೆ ಎಂದರು. ಇನ್ನು ಈಶ್ವರಪ್ಪನವರ ರಕ್ತ ಮಾತ್ರ ಅಲ್ಲ ಎಲ್ಲರ ರಕ್ತವೂ ಹಿಂದುಗಳದ್ದು ಎಂದು ಈಶ್ವರಪ್ಪನವರ ಹೇಳಿಕೆಗೆ ಟಾಂಗ್ ನೀಡಿದರು.