Tuesday, February 27, 2024

ಆರು ತಿಂಗಳಲ್ಲಿ ಸರ್ಕಾರ ಜಾರಿಗೊಳಿಸಿದ ಅಭಿವೃದ್ದಿ ಯೋಜನೆಗಳ ವರದಿ ನೀಡಲಿ: ಬೊಮ್ಮಾಯಿ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಬಜೆಟ್ ನಲ್ಲಿ ಘೊಷಿಸಿರುವ ಎಷ್ಟು ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಾಹಿತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಂದು ಆರು ತಿಂಗಳಾಯಿತು. ಈ ಸರ್ಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ‌. ಇವರು ಪದೇ ಪದೇ ಗ್ಯಾರೆಂಟಿಗಳ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ‌. ವಾಸ್ತವದಲ್ಲಿ ಜನರಿಗೆ ಗ್ಯಾರೆಂಟಿ ಯೋಜನೆಗಳು ತಲುಪುತ್ತಿಲ್ಲ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುವ ಬದಲು ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಅದರ ಹೊರತಾಗಿ ಕಾಳ ಸಂತೆಯಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಸರ್ಕಾರ ಶಾಮೀಲಾಗಿದೆ ಅಂತ ಅನುಮಾನ ಬರುತ್ತಿದೆ ಎಂದು ಹೇಳಿದರು.

ಗೃಹ ಲಕ್ಷ್ಮೀ ಸಮೀಕ್ಷೆ ಮಾಡಿದರೆ ಮೊದಲ ತಿಂಗಳು ಕೇವಲ ಶೇ 35% ರಷ್ಟು ಜನರಿಗೆ ಬಂದಿದೆ. ನಂತರದ ಕಂತುಗಳು ಸರಿಯಾಗಿ ಬಂದಿಲ್ಲ. ಗೃಹ ಲಕ್ಷ್ಮೀಯರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ವಿದ್ಯುತ್ ವಿಚಾರದಲ್ಲಂತೂ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ.‌ ಸಿಎಂ ಸಿದ್ದರಾಮಯ್ಯ ಅವರು ಐದು ಗಂಟೆ ನಿರಂತರ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ಆದರೆ, ರೈತರಿಗೆ ಕೇವಲ 3 ಗಂಟೆ ಮಾತ್ರ‌ ವಿದ್ಯುತ್ ಸಿಗುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ತೆಲಂಗಾಣಕ್ಕೆ ಹೋಗಿ ಗ್ಯಾರೆಂಟಿಗಳ ಬಗ್ಗೆ ಪ್ರಚಾರ ಪಡೆಯುತ್ತಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು.

ಸಾಲದ ಪ್ರಮಾಣ ಹೆಚ್ಚಾಗಿದೆ
ರಾಜ್ಯ ಸರಕಾರ ಬಜೆಟ್ ನಲ್ಲಿ ಘೊಷಣೆ ಮಾಡಿರುವ ಎಷ್ಟು ಯೋಜನೆಗಳ ಅನುಷ್ಠಾನ ಮಾಡಿದ್ದೀರಿ, ಈ ಬಗ್ಗೆ ಸದನದಲ್ಲಿ ಸ್ಪಷ್ಟವಾದ ಮಾಹಿತಿ ನೀಡಬೇಕು. ಕರ್ನಾಟಕದ ಆರ್ಥಿಕವಾಗಿ ಸಬಲವಾಗಿರುವ ರಾಜ್ಯ, ಆದರೆ, ಯಾವುದೇ ಯೋಜನೆಗಳನ್ನು ಜಾರಿಗೆ ತರದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನಾವು ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಂದಿದ್ದು ಅದರ ಲಾಭ ಪಡೆದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ ಪಿ ಯೋಜನೆಗಳ 11 ಸಾವಿರ ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗಿದೆ.‌ ರಿಸರ್ವ್ ಬ್ಯಾಂಕ್ ಸಾಲದ ಸುಳಿಗೆ ಸಿಲುಕಿರುವ ರಾಜಸ್ತಾನ, ಪಂಜಾಬ್ ಸೇರಿದಂತೆ ಮೂರು ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟಿದೆ. ನಮ್ಮ ರಾಜ್ಯವನ್ನು ಆ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬೇಡಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲ ಹಂತದಲ್ಲೂ ನಡೆಯುತ್ತಿದೆ. ಸಣ್ಣ ಪುಟ್ಟ ಕೆಲಸ ಮಾಡಿಕೊಡುವಲ್ಲಿಯೂ ವಸೂಲಿ ನಡೆಯುತ್ತಿದೆ. ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ನಮ್ಮ ಮೇಲೆ 40% ಆರೋಪ ಮಾಡಿದ್ದರು. ಈಗ 50% ಕಮಿಷನ್ ನೇರವಾಗಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆಯೋಗ‌ ರಚನೆ ಮಾಡಿದೆ. ಆ ಆಯೋಗ ಪ್ರಾಮಾಣಿಕವಾಗಿ ಎಲ್ಲ ಪ್ರಕರಣಗಳ ತನಿಖೆ ನಡೆಸಲಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!