October 10, 2026
Saturday, October 10, 2026
spot_img

ಯಶಸ್ಸು ಸಿಕ್ಕಾಗ ವಿರೋಧಿಗಳು ಹೆಚ್ಚಾಗ್ತಾರೆ: ಬಾಲಿವುಡ್ ನಟನ ಪರ ಬ್ಯಾಟಿಂಗ್ ಮಾಡಿದ ಕಂಗನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ ಸಿನಿಮಾದಿಂದ ನಟ ರಣವೀರ್ ಸಿಂಗ್ ಹೊರನಡೆದಿದ್ದಾರೆ ಎನ್ನಲಾದ ವಿವಾದ ಇಡೀ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ವಿರುದ್ಧ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಅಸಹಕಾರದ ನಿರ್ಧಾರ ಕೈಗೊಂಡಿರುವುದರ ಬಗ್ಗೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮುಂಬರುವ ಹೊಸ ಚಿತ್ರ ‘ಭಾರತ್ ಭಾಗ್ಯ ವಿಧಾತಾ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ರಣವೀರ್ ಸಿಂಗ್ ಎದುರಿಸುತ್ತಿರುವ ನಿಷೇಧದ ಭೀತಿಯ ಕುರಿತು ಮುಕ್ತವಾಗಿ ಮಾತನಾಡಿದರು.

“ನನ್ನನ್ನೂ ಎಲ್ಲರೂ ಬ್ಯಾನ್ ಮಾಡಿದ್ದರು” ಎಂದ ಕಂಗನಾ:

ಚಿತ್ರರಂಗದಲ್ಲಿ ತಾವು ಎದುರಿಸಿದ ಕಹಿ ನೆನಪುಗಳನ್ನು ಮೆಲುಕು ಹಾಕಿದ ಕಂಗನಾ, “ನೀವು ರಣವೀರ್ ಸಿಂಗ್ ಬಗ್ಗೆ ಕೇಳುತ್ತಿದ್ದೀರಿ, ಆದರೆ ಇಂಡಸ್ಟ್ರಿಯಲ್ಲಿ ನನ್ನನ್ನೇ ಎಲ್ಲರೂ ಬ್ಯಾನ್ ಮಾಡಿದ್ದರು. ಒಬ್ಬ ವ್ಯಕ್ತಿಯ ಯಶಸ್ಸು ಮತ್ತು ಸ್ಥಾನಮಾನ ಹೆಚ್ಚಾದಂತೆ, ಸಮಾಜದಲ್ಲಿ ಅವರ ವಿರೋಧಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಜೀವನದಲ್ಲಿ ನಾವು ಮುಂದೆ ಸಾಗುತ್ತಿದ್ದಂತೆ ಸಾಲು ಸಾಲು ಅಡೆತಡೆಗಳು ಎದುರಾಗುವುದು ಸಹಜ. ಬದುಕು ಯಾವಾಗಲೂ ಸುಗಮವಾಗಿ ಇರುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.

ಕೊನೆಗೆ ಎಲ್ಲವೂ ಸರಿಯಾಗಲಿದೆ:

ಬಾಲಿವುಡ್‌ನಲ್ಲಿ ನೆಪೋಟಿಸಂ ಹಾಗೂ ಇತರ ವಿಚಾರಗಳ ವಿರುದ್ಧ ಸದಾ ಧ್ವನಿ ಎತ್ತುವ ಕಂಗನಾ, ರಣವೀರ್ ಸಿಂಗ್‌ಗೆ ಪರೋಕ್ಷವಾಗಿ ಧೈರ್ಯ ತುಂಬಿದರು. “ನಾನು ಕೂಡ ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಕಠಿಣ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ಇಂದು ನಾನು ಚೆನ್ನಾಗಿದ್ದೇನೆ, ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಸಕ್ರಿಯವಾಗಿದ್ದೇನೆ. ಹಾಗಾಗಿ ಇಂತಹ ತಾತ್ಕಾಲಿಕ ನಿಷೇಧ ಅಥವಾ ವಿವಾದಗಳಿಂದ ಯಾವುದೇ ದೊಡ್ಡ ವ್ಯತ್ಯಾಸವಾಗುವುದಿಲ್ಲ. ಕೊನೆಯಲ್ಲಿ ಎಲ್ಲವೂ ಸರಿಯಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದಿದ್ದರಿಂದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿವಾದ ಸದ್ಯ ಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Must Read