ಭಾರತದಲ್ಲಿ ತುಂಬಾ ಹಳೆ ಕಾಲದಿಂದಲೂ ಬೆಳಿಗ್ಗೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡೋದು ಒಂದು ಪದ್ಧತಿಯಾಗಿದೆ ನಡೆದುಕೊಂಡು ಬಂದಿದೆ. ಧರ್ಮಗ್ರಂಥಗಳು ಹಾಗೂ ಪುರಾಣಗಳಲ್ಲಿ ನಸುಕಿನಲ್ಲಿ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಶುದ್ಧಿಯಾಗುತ್ತದೆ ಎಂಬುದಾಗಿ ಉಲ್ಲೇಖವಿದೆ. ಆದರೆ ನಮ್ಮ ನೆರೆ ರಾಷ್ಟ್ರಗಳಾದ ಜಪಾನ್, ಚೀನಾ ಹಾಗೂ ಕೋರಿಯಾ ದೇಶಗಳಲ್ಲಿ ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವ ಅಭ್ಯಾಸವಿದೆ.

ಅವರ ನಂಬಿಕೆಯ ಪ್ರಕಾರ, ಇಡೀ ದಿನದ ಕೆಲಸದ ನಂತರ ರಾತ್ರಿ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಮೇಲಿರುವ ಧೂಳು ಹಾಗೂ ವಿಷಕಾರಿ ಅಂಶಗಳು ತೊಳೆದು ಹೋಗುತ್ತದೆ. ಜೊತೆಗೆ ಆಯಾಸ ನಿವಾರಣೆ ಆಗಿ, ಉತ್ತಮ ನಿದ್ರೆಗೆ ಸಹಾಯವಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಾದ ಅಮೆರಿಕಾ, ಯುರೋಪ್ ಹಾಗೂ ಕೆನಡಾದವರು ಹೆಚ್ಚಿನವರು ಮುಂಜಾನೆ ಸ್ನಾನ ಮಾಡುವುದನ್ನು ಶ್ರೇಷ್ಠವೆಂದು ಪರಿಗಣಿಸುತ್ತಾರೆ.

ಇವೆರಡರಲ್ಲಿ ಯಾವುದು ಬೆಸ್ಟ್ ಅಂತ ಕೇಳಿದ್ರೆ ರಾತ್ರಿ ಸ್ನಾನವು ದೇಹಕ್ಕೆ ಹೆಚ್ಚು ಶಾಂತಿ ಮತ್ತು ತಾಜಾತನವನ್ನು ನೀಡುತ್ತದೆ. ಕಾರ್ಮಿಕರು ಹಾಗೂ ಶಾರೀರಿಕ ಕೆಲಸ ಮಾಡುವವರಿಗೆ ಇದು ಇನ್ನಷ್ಟು ಸೂಕ್ತ, ಏಕೆಂದರೆ ದೇಹದ ಆಯಾಸವನ್ನು ಕಡಿಮೆಮಾಡಿ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಸಂಶೋಧನೆಗಳ ಪ್ರಕಾರ, ಮಲಗುವ ಮೊದಲು ಸ್ನಾನ ಮಾಡುವುದರಿಂದ ಒಳ್ಳೆಯ ನಿದ್ರೆ ಸಾಧ್ಯವಾಗುತ್ತದೆ.

ಆದರೆ ಇನ್ನೊಂದು ಸಂಶೋಧನೆಯ ಪ್ರಕಾರ, ಬೆಳಿಗ್ಗೆ ಅಥವಾ ರಾತ್ರಿ – ಎರಡೂ ಸಮಯದಲ್ಲಿ ಸ್ನಾನ ಮಾಡುವುದರಿಂದಲೂ ದೇಹಕ್ಕೆ ಉತ್ತಮ. ಬೆಳಗಿನ ಸ್ನಾನ ದಿನವನ್ನು ಚೈತನ್ಯದಿಂದ ಆರಂಭಿಸಲು ನೆರವಾಗುತ್ತದೆ, ರಾತ್ರಿ ಸ್ನಾನ ದಿನವಿಡೀ ಆಗಿರುವ ಆಯಾಸವನ್ನು ನೀಗಿಸುತ್ತದೆ.

ಸ್ನಾನ ಮಾಡುವುದಕ್ಕೆ ಸಮಯವೇ ಮುಖ್ಯ ಎನ್ನುವುದಿಲ್ಲ, ಅದು ಬೆಳಿಗ್ಗೆಯಾಗಲಿ ಅಥವಾ ರಾತ್ರಿ ಆಗಲಿ – ಎರಡಕ್ಕೂ ತನ್ನದೇ ಆದ ಪ್ರಯೋಜನವಿದೆ. ಆದ್ದರಿಂದ ನಿಮ್ಮ ದೇಹದ ಅವಶ್ಯಕತೆ ಹಾಗೂ ದಿನಚರಿಯನ್ನು ಅವಲಂಬಿಸಿ ಸ್ನಾನದ ಸಮಯವನ್ನು ಆರಿಸಿಕೊಂಡರೆ ಆರೋಗ್ಯಕರ ಜೀವನ ಶೈಲಿಗೆ ನೆರವಾಗುತ್ತದೆ.