ಯಾವ ಜವಾಬ್ದಾರಿ ಕೊಟ್ಟರೂ ಸರ್ಕಾರಕ್ಕೆ ಹೆಸರು ತರುವ ಕೆಲಸ ಮಾಡುತ್ತೇನೆ : ರೇಣುಕಾಚಾರ್ಯ

ಹೊಸ ದಿಗಂತ ವರದಿ, ಚಿತ್ರದುರ್ಗ:

ಅಬಕಾರಿ ಸಚಿವನಾಗಿ, ನಿಗಮ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವ ಇದೆ. ಯಾವ ಜವಾಬ್ದಾರಿ ಕೊಟ್ಟರೂ ಸರ್ಕಾರ, ಸಂಘಟನೆಗೆ ಹೆಸರು ತರುವ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಭೋವಿ ಗುರುಪೀಠಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿಗಳು, ರಾಷ್ಟ್ರೀಯ, ರಾಜ್ಯ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಮಾಡುವುದು ಅವರ ಪರಮಾಧಿಕಾರ. ಹಾಗಾಗಿ ಸಿಎಂ ದೆಹಲಿಗೆ ಹೊರಟಿದ್ದಾರೆ. ಆದರೆ ವರಿಷ್ಠರು ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ ಎಂದರು.
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಚುನಾವಣೆಗೆ 15 ತಿಂಗಳು ಬಾಕಿ ಇದೆ. ಈ ಹಂತದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಒಳ್ಳೆಯದು. ಈ ಹಿಂದೆ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರ ಜೊತೆ ಮಾತನಾಡಿ ನನ್ನ ಮನವಿ ತಿಳಿಸಿದ್ದೇನೆ. ಅರುಣ್ ಸಿಂಗ್ ಅವರು ನನ್ನನ್ನು ದೆಹಲಿಗೆ ಕರೆದಿದ್ದಾರೆ. ಇದೇ ತಿಂಗಳು 8, 9,10 ರಂದು ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.
ನಾನು ಎಂಟಿಆರ್ ರೆಡಿಮೇಡ್ ಫುಡ್ ಅಲ್ಲ. ನಾನು ಸಂಘರ್ಷದಿಂದ ರಾಜಕೀಯಕ್ಕೆ ಬಂದವನು. ಶಾಸಕಾಂಗ ಸಭೆಯಲ್ಲಿ ನಾನು ಅನೇಕ ಸಲ ಪ್ರಸ್ತಾಪ ಮಾಡಿದ್ದೇನೆ. ಎಲ್ಲ ಶಾಸಕರು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸಚಿವರು ಪೋನ್ ರಿಸೀವ್ ಮಾಡದ ಬಗ್ಗೆ ಸೋಮಶೇಖರ್ ರೆಡ್ಡಿ ಹೇಳಿದ್ದು ಸರಿಯಿದೆ. ತಪ್ಪು ತಿದ್ದಿಕೊಳ್ಳಬೇಕು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಸುದ್ದಿಗಾರರ ಪ್ರಶ್ನಯೊಂದಕ್ಕೆ ಉತ್ತರಿಸಿದರು.
ಕೆಲವರು ನಮ್ಮಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಗತ್ತು ಮಾಡುತ್ತಾರೆ. ಬಿಜೆಪಿ ಸರ್ಕಾರಕ್ಕೆ ಯಾರ ಸ್ವಂತ ಆಸ್ತಿ ಅಲ್ಲ. ಒಂದು ಸಲ ಅಧಿಕಾರ ತ್ಯಾಗ ಮಾಡಲಿ. ಸೋಮಾರಿ ಸಚಿವರು, ಆಲಸ್ಯ ಮಾಡುವ ಸಚಿವರ ಹೆಸರುಗಳನ್ನು ಅರುಣ್ ಸಿಂಗ್ ಹಾಗೂ ರಾಜ್ಯ ಅಧ್ಯಕ್ಷರಿಗೆ ಹೇಳಿದ್ದೇನೆ. ಮುಂದಿನ ತೀರ್ಮಾನ ಅವರು ಕೈಗೊಳ್ಳಲಿದ್ದಾರೆ. ಹೆಚ್ಚುವರಿ ಖಾತೆ ಬದಲಾಗಿ ನಾಲ್ವರಿಗೆ ಅವಕಾಶ ನೀಡಲಿ ಎಂದರು.
ಬಿಜೆಪಿ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತಂತೆ ಪ್ರತಿಕ್ರಯಿಸಿದ ರೇಣುಕಾಚಾರ್ಯ, ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ನವರು, ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರವರ ಪಕ್ಷದ ವಿಚಾರ ನೋಡಿಕೊಂಡರೆ ಸಾಕು. ಅದರಂತೆ ಕಾಂಗ್ರೆಸ್ ಪಕ್ಷ ಭ್ರಮಾ ಲೋಕದಲ್ಲಿ ತೇಲುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!