ಹೊಸದಿಗಂತ ವರದಿ, ದಾವಣಗೆರೆ-:
ರಾಜ್ಯ ಸರ್ಕಾರ ನಡೆಸಿದ್ದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ಸ್ವಾರ್ಥಕ್ಕಾಗಿ ಟೀಕಿಸಿದ್ದ ಬಿಜೆಪಿಗರು ಇದೀಗ ತಾವೇ ಜಾತಿ ಗಣತಿ ಮಾಡಲು ಹೊರಟಿರುವುದು ಯಾರ ಓಲೈಕೆಗಾಗಿ? ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಖಾರವಾಗಿ ಪ್ರಶ್ನಿಸಿದ್ದಾರೆ.
ನಗರಕ್ಕೆ ಗುರುವಾರ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಜಾತಿ ಗಣತಿಗೆ ನಿರ್ಧಾರ ಮಾಡಿರುವುದು ಸ್ವಾಗತಾರ್ಹ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಬಹಳ ಹಿಂದೆ ಇದೆ. ಸಿದ್ದರಾಮಯ್ಯ ಈಗಾಗಲೇ ಅದನ್ನು ಮಾಡಿ ಮುಗಿಸಿದ್ದಾರೆ. ಆರ್ಥಿಕ, ಸಾಮಾಜಿಕ ಸಮೀಕ್ಷಾ(ಜಾತಿ ಗಣತಿ) ವರದಿಯನ್ನು ಸಚಿವ ಸಂಪುಟದಲ್ಲಿ ಯಾರೂ ವಿರೋಧಿಸಿಲ್ಲ. ವರದಿಗೆ ವಿರುದ್ಧವಾದ ಅಭಿಪ್ರಾಯವನ್ನು ಯಾವುದೇ ಸಚಿವರೂ ನೀಡಿಲ್ಲ. ಯಾರಿಗೂ ಅನ್ಯಾಯವಾಗದಂತೆ ನೋಕೊಳ್ಳಬೇಕು ಎಂದಷ್ಟೇ ಸಲಹೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ವರದಿ ಬಿಡುಗಡೆಗೆ ಸರ್ಕಾರ ಸಿದ್ಧವಿಲ್ಲ ಅಂತಾ ವಿರೋಧ ಪಕ್ಷದವರು ಆರೋಪ ಮಾಡಿದ್ದರು. ವರದಿ ಕಳೆದು ಹೋಗಿದೆ ಎನ್ನುವ ಬಿಜೆಪಿಯವರಿಗೆ ಅದನ್ನು ಹುಡುಕಿಕೊಂಡು ಬರಲಿ. ಸುಮ್ಮನೇ ಸುಳ್ಳು ಹೇಳಿ ತಪ್ಪು ಸಂದೇಶ ನೀಡುವ ಕೆಲಸವಾಗುತ್ತಿದೆ. ಜಾತಿಗಣತಿಯ ಎಲ್ಲ 8 ಸಂಪುಟಗಳನ್ನು ಸರ್ಕಾರದ ಎಲ್ಲ ಸಚಿವರಿಗೆ ನೀಡಲಾಗಿದೆ. ವರದಿಯೂ ಕಳೆದು ಹೋಗಿಲ್ಲ, ಎಲ್ಲವೂ ಭದ್ರವಾಗಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದವರ ಸ್ಥಿಮಿತತೆಯೇ ಸರಿ ಇಲ್ಲ. ಕಾಂಗ್ರೆಸ್ ಶಾಲು ಹಾಕಿಕೊಂಡು ನಮ್ಮ ಕಾರ್ಯಕ್ರಮದಲ್ಲಿ ಕುಳಿತುಕೊಂಡು ಧಿಕ್ಕಾರ ಕೂಗುವವರನ್ನು ಏನನ್ನಬೇಕು? ಪೊಲೀಸ್ ಅಧಿಕಾರಿ ಮೇಲೆ ಸಿದ್ದರಾಮಯ್ಯ ಕೈ ಎತ್ತಿಲ್ಲ, ಏಕವಚನದಲ್ಲಿ ಕರೆದಿಲ್ಲ. ಪ್ರೀತಿಯಿಂದ ಕರೆದು ಕೈ ಎತ್ತಿದ್ದಾರೆ ಎಂದು ಸಚಿವ ರಾಜಣ್ಣ ಸಮರ್ಥಿಸಿಕೊಂಡರು.
ಕಾಶ್ಮೀರದ ಪಹಲ್ಗಾಮ್ ನಲ್ಲಿ ದಾಳಿ ಮಾಡಿದ ಉಗ್ರರಿಗೆ ಶಿಕ್ಷೆ ಆಗಲೇಬೇಕು ಎಂಬುದು ದೇಶದ ಜನರ ಭಾವನೆ. ನಾನು ಕೂಡ ದೇಶದ ಪ್ರಜೆಗಳಲ್ಲಿ ಒಬ್ಬ. ಹಾಗಾಗಿ ಅಂತಹವರಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂಬುದು ನನ್ನ ಅಭಿಪ್ರಾಯ ಕೂಡ ಆಗಿದೆ ಎಂದರು.