ಮಗ ಯಾರು, ಕಳ್ಳನನ್ನ ಮಗ ಯಾರು ಎಂಬುದು ಚುನಾವಣೆಯಲ್ಲಿ ಜನ ನಿರ್ಧಾರ ಮಾಡುತ್ತಾರೆ: ಪ್ರಕಾಶ್‌ ರೈ

ಹೊಸದಿಗಂತ ವರದಿ, ಮಂಡ್ಯ :

ಮಂಡ್ಯದ ಮಗ ಯಾರು, ಕಳ್ಳನನ್ನ ಮಗ ಯಾರು ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನರು ನಿರ್ಧರಿಸುತ್ತಾರೆ ಎಂದು ಖ್ಯಾತ ಚಿತ್ರ ನಟ ಪ್ರಕಾಶ್‌ರೈ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟದ ವತಿಯಿಂದ ನಗರದ ರೈತ ಸಭಾಂಗಣದಲ್ಲಿ ನಡೆದ ಶ್ರಮಿಕರ ಸ್ವಾಭಿಮಾನಿ ಗೆಲುವಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದಾರಿ ತಪ್ಪಿದ ಮಗ ಎಂದು ಟೀಕಿಸಿದರು.

ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡಲು ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ ? ಎಂದು ಪ್ರಶ್ನಿಸಿದ ಅವರು, ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ’ಗಂಡ ಸತ್ತ ಮುಂಡೆ’ ಎಂದು ನಿಂದಿಸಿದ್ದಕ್ಕೆ ಮಂಡ್ಯ ಜಿಲ್ಲೆಯ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅಂತದ್ದೆ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಈಗ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ದಿಲ್ಲಿಯ ಮಹಾಪ್ರಭು ಮೈಸೂರಿಗೆ ಬಂದಿದ್ದಾರೆ :
ಲೋಕಸಭಾ ಚುನಾವಣೆ ಬಂದಿರುವುದರಿಂದ ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭುಗಳು ಬಂದಿದ್ಧಾರೆ. ಇದರಿಂದಾಗಿ ಮಹಾಪ್ರಭುವಿನ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಸ್ಸುಗಳು ಹೊರಟಿವೆ. ಇದರಿಂದ ಬೆಂಗಳೂರು-ಮೈಸೂರು ಹೈವೇ ನಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನಮ್ಮ ಮಹಾಪ್ರಭುಗಳು ಕೋವಿಡ್ ಕಾಲದಲ್ಲಿ ಯಾಕೆ ಬರಲಿಲ್ಲ ಎಂದು ಮೋದಿಯವರನ್ನು ಪ್ರಶ್ನಿಸಿದರು.

ಬರ ಪರಿಹಾರ ನೀಡದ ಕೇಂದ್ರ :
ಕಳೆದ ಸೆಪ್ಟಂಬರ್‌ನಲ್ಲಿ ಬರ ಪರಿಹಾರ ನೀಡಿ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ ಏಪ್ರಿಲ್ ಬಂದರೂ ಬರ ಪರಿಹಾರ ನೀಡಲಿಲ್ಲ, ಇದರಿಂದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿದೆ, ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರಕ್ಕೆ ನೋಟೀಸ್ ನೀಡಲು ಮುಂದಾದಾಗ, ನೋಟೀಸ್ ನೀಡಬೇಡಿ ಮಾನ ಮರ್ಯಾದೆ ಹೋಗುತ್ತೇ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ನಾಟಕ ಯಾಕೆ ? ಎಂದು ಛೇಡಿಸಿದರು.

ಮುಖಂಡರಾದ ವಕೀಲ ಬಿ.ಟಿ. ವಿಶ್ವನಾಥ್, ಹೋರಾಟಗಾರರಾದ ಸಿ.ಕುಮಾರಿ, ಲತಾ ಶಂಕರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!