ಹೊಸದಿಗಂತ ವರದಿ ಕಾಸರಗೋಡು:
ಆತ ಕೇವಲ ಮೂರೂವರೆ ವರ್ಷದ ಪುಟ್ಟ ಬಾಲಕ. ತನ್ನ ಬಾಲ್ಯದ ಆಟೋಟಗಳಲ್ಲಿ ಕಳೆಯಬೇಕಾದ ಎಳವೆ. ಮಗುವನ್ನು ಎತ್ತಿ ಆಡಿಸಿ ಸಂತೋಷಪಡಬೇಕಾದ ಹೆತ್ತವರು. ಸಹೋದರನೊಂದಿಗೆ ತುಂಟಾಟದಲ್ಲಿ ತೊಡಗಬೇಕಾದ ಮಗು. ಆದರೆ ಇದ್ಯಾವುದೂ ಆ ಕುಟುಂಬದಲ್ಲಿ ಇಲ್ಲದಾಗಿದೆ. ಪುಟ್ಟ ಬಾಲಕನಿಗೆ ಅಂಟಿದ ವಿಚಿತ್ರ ಕಾಯಿಲೆಯು ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡಿದೆ. ಕಳೆದೆರಡು ವರ್ಷಗಳಿಂದ ಹೆತ್ತವರು ಆಸ್ಪತ್ರೆಯಲ್ಲೇ ವಾಸಿಸುವಂತಾಗಿದೆ.
ಮೂಲತಃ ಕಾಸರಗೋಡು ಜಿಲ್ಲೆಯ ಪಾಲಕ್ಕುನ್ನು ನಿವಾಸಿಯಾಗಿರುವ ಮೋಹನ್ ಕೆ. ಎಂಬವರು ನೀರ್ಚಾಲು ಸಮೀಪದ ಬಿರ್ಮಿನಡ್ಕ ಎಂಬಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಶ್ವೇತಾ ಮತ್ತು ಇಬ್ಬರು ಮುದ್ದಾದ ಪುತ್ರರೊಂದಿಗೆ ಚಿಕ್ಕ ಚೊಕ್ಕ ಸಂಸಾರ. ದೊಡ್ಡ ಮಗ ತನುಷ್‌ಗೆ 10 ವರ್ಷ ಪ್ರಾಯ. ಈತ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ 5 ನೇ ತರಗತಿಯ ವಿದ್ಯಾರ್ಥಿ. ಮತ್ತೊಬ್ಬ ಮೂರೂವರೆ ವರ್ಷ ಪ್ರಾಯದ ಇಶಾನ್. ಈತನಿಗೆ ಒಂದೂವರೆ ವರ್ಷ ಪ್ರಾಯವಾಗಿದ್ದಾಗ ಅಕಸ್ಮಾತ್ ಆಗಿ ಅನಾರೋಗ್ಯ ಕಾಡಿತ್ತು.
ಅಪಸ್ಮಾರದ ರೀತಿಯಲ್ಲಿ ಮಗುವು ಮಾನಸಿಕ ವ್ಯಗ್ರತೆಯಿಂದ ಹೊರಳಾಡುವುದು, ಏನೇನೋ ಹೇಳುವುದು ಮಾಡುತ್ತಿತ್ತು. ಆತನನ್ನು ಹಿಡಿದಿಟ್ಟುಕೊಳ್ಳಲು ಇಬ್ಬರ ಸಹಾಯ ಬೇಕಿತ್ತು. ಅನಂತರ ಶ್ವಾಸವು ನಿಂತುಹೋದ ರೀತಿಯಲ್ಲಿ ಮಗುವು ಒಂದು ವಾರದವರೆಗೆ ಪ್ರಜ್ಞಾಹೀನವಾಗಿಯೇ ಇರುತ್ತಿತ್ತು. ಇದು ಯಾವ ರೋಗವೆಂದು ಗುರುತಿಸಲು ಸಾಧ್ಯವಾಗದೆ ಇತ್ತೀಚೆಗೆ ವೈದ್ಯರು ಅದನ್ನು ಮಾಕ್ರೊ ಸೆಫಾಲಿ ರೋಗ ಎಂಬುದಾಗಿ ಹೇಳಿದ್ದರು.
ಇದೊಂದು ಅಪೂರ್ವ ರೋಗವಾಗಿದ್ದು , ತಲೆಯ ಒಳಗಡೆ ಎಲುಬು ಬೆಳೆಯುವುದು ಎಂಬುದನ್ನು ಸಂಶೋಧನೆಯ ಮೂಲಕ ಕಂಡುಹಿಡಿಯಲಾಗಿದೆ. ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 6 ವರ್ಷ ತುಂಬುವ ತನಕ ಚಿಕಿತ್ಸೆ ಮುಂದುವರಿಸಬೇಕಾಗಬಹುದು ಎಂದು ತಜ್ಞ ವೈದ್ಯರ ತಂಡವು ತಿಳಿಸಿದೆ. ಪ್ರಸ್ತುತ ತಿಂಗಳಿಗೆ 30-40 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಪುಟ್ಟ ಮಗು ಇಶಾನ್‌ನ ಚಿಕಿತ್ಸೆಗಾಗಿ ಈ ಬಡ ಕುಟುಂಬವು ಸಮಾಜದ ಉದಾರ ದಾನಿಗಳ ಸಹಾಯ ಯಾಚಿಸಿದೆ. ಒಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದ ಪುಣ್ಯಕಾರ್ಯದಲ್ಲಿ ಎಲ್ಲರೂ ಜೋಡಿಸಬೇಕೆಂದು ಕೇಳಿಕೊಳ್ಳಲಾಗಿದೆ.
ಬ್ಯಾಂಕ್ ಖಾತೆ ನಂಬರ್
ಸಹಾಯಧನವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಕಳುಹಿಸಲು ಕೋರಲಾಗಿದೆ.
ಎಸ್‌ಬಿಐ ಕಾಸರಗೋಡು ಶಾಖೆ
ಶ್ವೇತಾ, ಎ|ಸಿ ನಂಬರ್: 42166650458
ಐಎಫ್‌ಎಸ್‌ಸಿ ಕೋಡ್: ಎಸ್‌ಬಿಐಎನ್೦೦೦6715
ಮೋಹನ್ ಕೆ. ಗೂಗಲ್ ಪೇ
ನಂಬರ್: 8848341308