IND VS ENG| ತಂಡಕ್ಕೆ ಮರಳಿದ ಕೊಹ್ಲಿ- ಜಡ್ಡು- ಪಂತ್;‌ ಹೂಡಾ, ಕಾರ್ತಿಕ್‌ ಸ್ಥಾನಕ್ಕೆ ಕುತ್ತು.!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೂರು ಪಂದ್ಯಗಳ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದಿರುವ ಭಾತರ ತಂಡ ಇಂದು ದ್ವಿತೀಯ ಕದನಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಸರಣಿ ಟೀಂ ಇಂಡಿಯಾ ಕೈವಶವಾಗಲಿದೆ. ಆದರೆ, ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್‌ ಆಟಗಾರರು ಈ ಪಂದ್ಯಕ್ಕೆ ಮರಳಿದ್ದು, ಮ್ಯಾನೇಜ್‌ ಮೆಂಟ್‌ ಗೆ ತಂಡದ ಆಯ್ಕೆಯೇ ಸವಾಲಾಗಿ ಪರಿಣಮಿಸಿದೆ. ಇಂದಿನ ಪಂದ್ಯದಲ್ಲಿ ಸ್ಟಾರ್‌ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್‌ ಪಂತ್‌, ಶ್ರೇಯಸ್‌ ಐಯ್ಯರ್‌ ಆಯ್ಕೆಗೆ ಲಭ್ಯವಾಗಲಿದ್ದಾರೆ. ತಂಡಕ್ಕೆ ಬುಮ್ರಾ ಸೇರ್ಪಡೆ ಖಚಿವಾಗಿದ್ದು ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ ಅರ್ಷದೀಪ್ ಸಿಂಗ್ ಹೊರಗುಳಿಯಲಿದ್ದಾರೆ. ಅಲ್ರೌಂಡರ್ ಅಕ್ಷರ್ ಪಟೇಲ್ ಸ್ಥಾನದಲ್ಲಿ ರವೀಂದ್ರ ಜಡೇಜಾ  ಕಾಣಿಸಿಕೊಳ್ಳುವುದು ಖಚಿತ. ‌
ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಯಾರನ್ನು ಆಡಿಸಬೇಕು ಎಂಬುದು ರೋಹಿತ್‌ ತಲೆನೋವು ಹೆಚ್ಚಿಸಿದೆ. ಕೊಹ್ಲಿ ಅನುಸ್ಥಿತಿಯಲ್ಲಿ ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ದೀಪಕ್ ಹೂಡಾ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಆದರೆ ಕೋಹ್ಲಿಗೆ ಸ್ಥಾನ ಮಾಡಿಕೊಡಲು ಹೂಡಾ ಅಥವಾ ಸೂರ್ಯಕುಮಾರ್‌ ಯಾದವ್‌ ಇಬ್ಬರಲ್ಲೊಬ್ಬರು ವಿಶ್ರಾಂತಿ ಪಡೆಯುವ ಅನಿವಾರ್ಯತೆ ಎದುರಾಗಿದೆ. ಮತ್ತೊಂದೆಡೆ ತಂಡದೊಳಕ್ಕೆ ಕಾಣಿಸಿಕೊಳ್ಳಲು ಮೂವರು ವಿಕೆಟ್‌ ಕೀಪರ್‌ ಗಳ ನಡುವೆ ಪೈಪೋಟಿ ಆರಂಭವಾಗಿದೆ. ಪಂತ್‌, ದಿನೇಶ್‌ ಕಾರ್ತಿಕ್‌ ಹಾಗೂ ಇಶಾನ್‌ ಕಿಶನ್‌ ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಸ್ಥಾನಪಡೆಯುವ ಅರ್ಹತೆ ಹೊಂದಿದ್ದಾರೆ. ಆದರೆ ಈ ಮೂವರಲ್ಲಿ ಒಬ್ಬರಿಗೆ ಮಾತ್ರವೇ ಸ್ಥಾನ ಸಿಗಲಿದೆ. ಪಂತ್‌ ತಂಡದ ಮೊದಲ ಆಯ್ಕೆಯ ಕೀಪರ್‌ ಆಗಿದ್ದು, ಟೆಸ್ಟ್‌ ನಲ್ಲಿ ಶತಕ ಸಿಡಿಸುವ ಮೂಲಕ ತಾನೆಷ್ಟು ಅಪಾಯಕಾರಿ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಕಿಶನ್‌ ತಮಗೆ ಸಿಕ್ಕ ಅವಕಾಶಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮತ್ತೆ ಕಮ್‌ ಬ್ಯಾಕ್‌ ಮಾಡಿರುವ ದಿನೇಶ್‌ ಕಾರ್ತಿಕ್‌  ಫಿನಿಶಿಂಗ್‌ ರೋಲ್‌ ನಲ್ಲಿ ಮಿಂಚುಹರಿಸುತ್ತಿದ್ದಾರೆ. ತಂಡದಲ್ಲಿ ಜಡೇಜಾ, ಪಾಂಡ್ಯಾ, ಪಂತ್‌ ಫಿನಿಶಿಂಗ್‌ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವುದರಿಂದ ಕಾರ್ತಿಕ್‌ ಈ ಪಂದ್ಯದಿಂದ ಹೊರಬೀಳುವ ಸಾಧ್ಯತೆ ಇದೆ. ಅಚ್ಚರಿಯ ಸಾಧ್ಯತೆಯಾಗಿ ಪಂತ್‌ ಇಶನ್ ಕಿಶನ್‌ ಜಾಗದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಕಾರ್ತಿಕ್‌ ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯೂ ಇಲ್ಲದಿಲ್ಲ. ಸತತ ವೈಫಲ್ಯ ಎದುರಿಸುತ್ತಿರುವ ನಾಯಕ ರೋಹಿತ್‌ ಹಾಗೂ ಕಿಂಗ್‌ ಕೊಹ್ಲಿಗೆ ಈ ಸರಣಿ ಎಚ್ಚರಿಕೆಯ ಗಂಟೆಯಾಗಿದೆ. ”
ಅತ್ತ ಬ್ಯಾಟಿಂಗ್‌ ವಿಭಾಗದಲ್ಲಿ ಅತ್ಯಂತ ಬಲಿಷ್ಠವಾಗಿ ಕಾಣುವ ಇಂಗ್ಲೆಂಡ್‌ ಸರಣಿ ಜೀವಂತವಾಗಿಡಲಿ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ತಂಡದಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಕಡಿಮೆ.

ಸಂಭಾವ್ಯ ತಂಡ:
ಭಾರತ:
ರೋಹಿತ್ ಶರ್ಮಾ (ಸಿ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್.

ಇಂಗ್ಲೆಂಡ್: ಜೋಸ್ ಬಟ್ಲರ್ ( ಕ್ಯಾಪ್ಟನ್‌, ವಿ.ಕೀ), ಜೇಸನ್ ರಾಯ್, ಡೇವಿಡ್ ಮಲಾನ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಸ್ಯಾಮ್ ಕುರಾನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ರೀಸ್ ಟೋಪ್ಲಿ, ಮಾರ್ಕ್ ಪಾರ್ಕಿನ್ಸನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!