ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತ ದೆಹಲಿಯು ದರೋಡೆಕೋರರ ನಿಯಂತ್ರಣದಲ್ಲಿದ್ದು, ಅಪರಾಧ ಸಂಖ್ಯೆ ಹೆಚ್ಚುತ್ತಿದೆ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಮಾತನಾಡಿದ ಅವರು, ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಮಿತ್ ಶಾ ಜವಾಬ್ದಾರರು ಎಂದು ಹೇಳಿದರು. ಆದರೆ ಅವರು ಚುನಾವಣೆಗಳಲ್ಲಿ ನಿರತರಾಗಿದ್ದಾರೆ. ದೆಹಲಿಯು ದರೋಡೆಕೋರರ ಹಿಡಿತದಲ್ಲಿದೆ. ಅದರ ಹಿಂದಿರುವ ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗ್ಗೆ ವಿಶ್ವಾಸ ನಗರದಲ್ಲಿ ಉದ್ಯಮಿ ಸುನಿಲ್ ಜೈನ್ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಪರಾಧಿಗಳು ಹೇಗೆ ನಿರ್ಭೀತರಾದರು? ಬೆದರಿಕೆ ಕರೆಗಳು ಅನೇಕ ಪ್ರಮುಖರನ್ನು ದೆಹಲಿಯನ್ನು ತೊರೆಯುವಂತೆ ಮಾಡಿದೆ ಎಂದು ಕೇಜ್ರಿವಾಲ್ ಆಕ್ರೋಶ ಹೊರಹಾಕಿದ್ದಾರೆ.