ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವರೇ ರಾಜ್ಯ ಸರ್ಕಾರದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಮಂಗಳವಾರ ಬೇಸರ ವ್ಯಕ್ತಪಡಿಸಿದರು.
ಸಮಯಕ್ಕೆ ಸರಿಯಾಗಿ ವಿಧಾನಸಭಾ ಅಧಿವೇಶಕ್ಕೆ ಹಾಜರಾಗಲು ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಏಕೆ ಸಚಿವರಾಗಬೇಕು?, ಸರ್ಕಾರದ ಪರವಾಗಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದಿದ್ದರೆ ಏಕೆ ಮಂತ್ರಿಯಾಗಬೇಕು? ಎಂದು ಸ್ಪೀಕರ್ ಖಾರವಾಗಿಯೇ ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾನೂನು ಮತ್ತು ಸುವ್ಯವಸ್ಥೆ ವಿಷಯ ಪ್ರಸ್ತಾಪಿಸುತ್ತಾ, ಸದನದಲ್ಲಿ ಸಚಿವರಿಲ್ಲ, ಇದ್ದ ಒಬ್ಬ ಸಚಿವರು ಎದ್ದು ಹೊರ ನಡೆದಿದ್ದಾರೆ. ಒಬ್ಬಳೇ ಪದ್ಮಾವತಿ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಈ ವೇಳೆ ಮಾತನಾಡಿದ ಸ್ಪೀಕರ್, ಸಚಿವರು ಸದನದಲ್ಲಿ ಹಾಜರಿರಬೇಕು, ಅವರ ಗೈರುಹಾಜರಿಯನ್ನು ಯಾರೂ ಸಹಿಸುವುದಿಲ್ಲ. ಸಚಿವರು ಈ ಸರ್ಕಾರದ ಘನತೆಯನ್ನು ಕುಗ್ಗಿಸುತ್ತಿದ್ದಾರೆ. ಉತ್ತಮ ಕೆಲಸಗಳ ಹೊರತಾಗಿಯೂ, ಸಚಿವರು ಸಮಯಕ್ಕೆ ಸರಿಯಾಗಿ ಸದನಕ್ಕೆ ಬಾರದೇ ಸರ್ಕಾರದ ಗೌರವವನ್ನು ತೆಗೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿ ಇದ್ದಾಗ ಎಲ್ಲಾ ಸಚಿವರೂ ಬರುತ್ತಾರೆ. ಅವರಿಲ್ಲದಿದ್ದಾಗಲೂ ಎಲ್ಲಾ ಸಚಿವರಿರಬೇಕು. ಮುಖ್ಯಮಂತ್ರಿ ಬೆಂಬಲಕ್ಕೆ ಸಚಿವರು ನಿಲ್ಲುವುದು ಬೇಕಾಗಿಲ್ಲ. ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಿದರು.