Thursday, December 8, 2022

Latest Posts

ಬಹುಜನಪ್ರಿಯ ಬ್ರಾಂಡ್ ಬಿಸ್ಲೆರಿಯನ್ನು ರಮೇಶ ಚವ್ಹಾಣ್ ಮಾರಹೊರಟಿದ್ದೇಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದಲ್ಲಿ ಪ್ಯಾಕೇಜ್ಡ್‌ ಕುಡಿಯುವ ನೀರಿನ ಉದ್ದಿಮೆಯಲ್ಲಿ ಮುಂಚೂಣಿಯಲ್ಲಿರುವ ಬಹುಜನಪ್ರಿಯ ಬ್ರಾಂಡ್‌ ʼಬಿಸ್ಲೆರಿʼ ಕಂಪನಿಯನ್ನು ಅದರ ಮಾಲೀಕ ರಮೇಶ ಚವ್ಹಾಣ್‌ ಮಾರ ಹೊರಟಿದ್ದಾರೆಂಬ ಸುದ್ದಿ ಆಗಲೇ ಅನೇಕ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಕಂಪನಿಯನ್ನು ಕೊಂಡುಕೊಳ್ಳುವ ರೇಸ್‌ ನಲ್ಲಿ ಟಾಟಾ ಕಂಪನಿಯೂ ಇದೆ ಎಂದು ಕೆಲವುಕಡೆ ವರದಿಯಾಗಿದ್ದರೆ. ಟಾಟಾ ಈಗಾಗಲೇ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂದೂ ಕೆಲವು ವರದಿಗಳು ಹೇಳಿವೆ. ಆದರೆ ಈ ಕುರಿತು ಕಂಪನಿಯ ಮಾಲೀಕ ರಮೇಶ ಚವ್ಹಾಣ್‌ ಪ್ರತಿಕ್ರಿಯಿಸಿದ್ದು ಟಾಟಾ ದೊಂದಿಗೆ ಯಾವುದೇ ಒಪ್ಪಂದವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕಂಪನಿಯನ್ನು ಮಾರಾಟ ಮಾಡುತ್ತಿರುವ ಸಂಗತಿ ನಿಜ ಆದರೆ ಇದುವರೆಗೂ ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಖಚಿತ ಪಡಿಸಿದ್ದಾರೆ.

ಕಂಪನಿಯನ್ನು ಮಾರಾಟ ಮಾಡುವ ಕುರಿತು ಹಲವು ಖರೀದಿದಾರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿರುವ ಅವರು ಟಾಟಾ ಗ್ರುಪ್‌ ಗೆ ಮಾರಾಟವಾಗಿರುವುದು ಸತ್ಯವಲ್ಲ ಎಂದಿದ್ದಾರೆ. ಸಾವಿರಾರು ಕೋಟಿರೂಪಾಯಿಯ ಲಾಭದಾಯಕ ಉದ್ದಿಮೆಯನ್ನು ಮಾರಾಟ ಮಾಡುವುದರ ಹಿಂದಿನ ಉದ್ದೇಶವೇನು ಎಂಬುದಕ್ಕೆ ಅವರು ಉತ್ತರಿಸಿದ್ದು ʼಈ ಉದ್ಯಮವನ್ನು ಯಾರಾದರೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದಿದ್ದಾರೆ. ತಮ್ಮ ಮಗಳು ಈ ವ್ಯವಹಾರವನ್ನು ನಿಭಾಯಿಸಲು ಆಸಕ್ತಿ ಹೊಂದಿಲ್ಲವಾದ್ದರಿಂದ ಈ ಉದ್ಯಮವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. “ಈ ಕುರಿತು ಇನ್ನೂ ಮಾತುಕತೆ ನಡೆಯುತ್ತಿದೆ ಆದ್ದರಿಂದ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ” ಎಂದು ರಮೇಶ ಚವ್ಹಾಣ್‌ ಹೇಳಿದ್ದಾರೆ.

ಮುಂಚಿನಿಂದಲೂ ಪಾನೀಯ ಉದ್ಯಮದಲ್ಲಿ ರಮೇಶ ಚವ್ಹಾಣ್ ಹೆಸರು ಗಳಿಸಿದ್ದರು. ಮೂರು ದಶಕಗಳ ಹಿಂದೆ 1993ರ ಸಮಯದಲ್ಲಿ ತಮ್ಮ ಮೃದು ಪಾನೀಯ ಬ್ರಾಂಡ್‌ ಗಳಾದ ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಸಿಟ್ರಾ, ಮಾಜಾ ಮತ್ತು ಲಿಮ್ಕಾಗಳಂತಹ ಬ್ರಾಂಡ್‌ ಗಳನ್ನು ಜಾಗತಿಕ ಪಾನೀಯ ಉದ್ದಿಮೆ ದಿಗ್ಗಜ ಕೋಕಾಕೋಲಾ ಕಂಪನಿಗೆ ಮಾರಾಟ ಮಾಡಿದ್ದರು.

ಈ ಬ್ರ್ಯಾಂಡ್‌ಗಳಲ್ಲಿ, ಥಮ್ಸ್ ಅಪ್ ಈಗಾಗಲೇ ಬಿಲಿಯನ್-ಡಾಲರ್ ಬ್ರಾಂಡ್ ಆಗಿ ಮಾರ್ಪಟ್ಟಿದೆ ಮತ್ತು ಕೋಕಾ-ಕೋಲಾ ಫ್ರೂಟ್ ಡ್ರಿಂಕ್ಸ್ ಬ್ರ್ಯಾಂಡ್ ಮಾಜಾ ಕೂಡ 2024 ರ ವೇಳೆಗೆ ಬಿಲಿಯನ್ ಡಾಲರ್ ಬ್ರಾಂಡ್ ಆಗಲಿದೆ ಎಂದು ಕಂಪನಿಯು ನಿರೀಕ್ಷಿಸುತ್ತಿದೆ ಎನ್ನಲಾಗಿದೆ.

ಇದಾದ ಬಳಿಕ ಮತ್ತೆ 2016ರಲ್ಲಿ ʼಬಿಸ್ಲೆರಿ POPʼಯನ್ನು ಪ್ರಾರಂಭಿಸುವ ಮೂಲಕ ತಂಪು ಪಾನೀಯಗಳ ಉದ್ಯಮಕ್ಕೆ ಮತ್ತೆ ಹಿಂದಿರುಗಿದ್ದರು. ಆದರೆ ಹಿಂದಿನಂತೆ ಮ್ಯಾಜಿಕ್‌ ಮಾಡಲು ವಿಫಲರಾಗಿದ್ದರು.

ಪ್ರಸ್ತುತ ಕಂಪನಿಯನ್ನು ಮಾರಲು ಚವ್ಹಾಣ್‌ ಚಿಂತಿಸುತ್ತಿದ್ದು ಟಾಟಾ ಸಮೂಹದ ಘಟಕ ಟಿಸಿಪಿಲ್‌ ಈ ಖರೀದಿಗೆ ರೇಸ್‌ ನಲ್ಲಿದೆ. ಈಗಾಗಲೇ ʼಹಿಮಾಲಯನ್‌ʼ ಹೆಸರಿನೊಂದಿಗೆ ಕುಡಿಯುವ ನೀರಿನ ಉದ್ದಿಮೆಯಲ್ಲಿರುವ ಟಾಟಾ ಸಮೂಹವು ಮಾರುಕಟ್ಟೆಯಲ್ಲಿ ವಿಸ್ತರಿಸಲು ಯೋಚಿಸುತ್ತಿದ್ದು ಒಂದುವೇಳೆ ಈ ಮಾರಾಟವನ್ನು ಅದು ಸವಾಧೀನ ಪಡಿಸಿಕೊಂಡರೆ ಬಾಟಲ್ ವಾಟರ್ ವಿಭಾಗದಲ್ಲಿ ಲೀಡರ್ ಆಗಿ ಹೊರ ಹೊಮ್ಮಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!