‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಮಾಡಿದ್ದೇಕೆ?: ರಕ್ಷಿತ್ ಶೆಟ್ಟಿ ಹೇಳ್ತಾರೆ ನೋಡಿ ಇದಕ್ಕೆ ಉತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಇಂದು ರಿಲೀಸ್ ಆಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ರಕ್ಷಿತ್ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್ (Rukmini Vasanth), ಚೈತ್ರಾ ಆಚಾರ್ ಪ್ರಧಾನ ಪಾತ್ರಗಳಲ್ಲಿ ನಟಿಸಿ, ಹೇಮಂತ್ ರಾವ್ ನಿರ್ದೇಶಿಸಿರುವ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1ರಂದು ಬಿಡುಗಡೆ ಆಗಿತ್ತು. ಆ ಸಿನಿಮಾ ಸಹ ಹಿಟ್ ಎನಿಸಿಕೊಂಡಿತ್ತು. ಈಗ ಸೈಡ್ ಬಿ ಸಹ ಹಿಟ್ ಆಗುವ ಸೂಚನೆಯನ್ನು ಮೊದಲ ದಿನವೇ ತೋರಿಸಿದೆ.

ಸಿನಿಮಾ ನೋಡಿದ ಕೆಲವರು ಈ ಸಿನಿಮಾವನ್ನು ಎರಡು ಭಾಗಗಳನ್ನಾಗಿ ಮಾಡದೆ ಒಂದೇ ಭಾಗ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕತೆಯನ್ನು ಅಲ್ಲಲ್ಲಿ ಎಳೆದಾಡಿದ ಭಾವ ಮೂಡುವುದನ್ನು ತಪ್ಪಿಸಬಹುದಿತ್ತು ಎಂಬ ಅಭಿಪ್ರಾಯ ಸಹ ನೀಡಿದ್ದಾರೆ.

ಹೀಗಾಗಿ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಿದ್ದೇಕೆ ಎಂಬುದರ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

ತಾವೇ ನಟಿಸಿ, ನಿರ್ಮಾಣ ಸಹ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದ ಮೊದಲ ದಿನದ ಮೊದಲ ಶೋ ವೀಕ್ಷಿಸಿ ಖುಷಿಯಿಂದ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ಈ ಸಿನಿಮಾವನ್ನು ಎರಡು ಭಾಗಗಳನ್ನಾಗಿ ಮಾಡಿದ ನಿರ್ಣಯ ಮಾಡಿದ್ದು ಹೇಗೆ ಎಂಬುದನ್ನು ವಿವರಿಸಿದರು. ”ಸಿನಿಮಾ ಪ್ರಾರಂಭ ಮಾಡಿದಾಗ ಇದು ಒಂದು ಭಾಗದ ಸಿನಿಮಾ ಅಷ್ಟೇ ಆಗಿತ್ತು. ಸಿನಿಮಾದ ಮೊದಲ ಭಾಗವನ್ನು ನೋಡಿದ ಪರಮವಃ ತಂಡದವರು ಇದು ಅಪೂರ್ಣ ಅನ್ನಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನನಗೂ ಸಹ ಸಿನಿಮಾದ ಮೊದಲ ಭಾಗ ನೋಡಿದಾಗ ಹಾಗೆಯೇ ಆಗಿತ್ತು ಎಂದಿದ್ದಾರೆ.

ಮೊದಲ ಭಾಗದಲ್ಲಿಯೇ ಕತೆಗೆ ಸರಿಯಾದ ಸಂಪೂರ್ಣತೆ ಕೊಟ್ಟು ಮುಗಿಸುವ ಚರ್ಚೆಗಳು ನಡೆದವು ಆದರೆ ನಿರ್ದೇಶಕ ಹೇಮಂತ್ ರಾವ್​ಗೆ ಅದು ಇಷ್ಟವಿರಲಿಲ್ಲ. ಅವರು ಸಿನಿಮಾವನ್ನು ಎರಡು ಭಾಗಗಳನ್ನಾಗಿ ಮಾಡುವ ಆಲೋಚನೆ ಮುಂದಿಟ್ಟರು. ನಾನು ಸದಾ ನಿರ್ದೇಶಕನ ಆಲೋಚನೆಗಳನ್ನು ಗೌರವಿಸುತ್ತೇನೆ. ಸಿನಿಮಾದೊಟ್ಟಿಗೆ, ಕತೆಯೊಟ್ಟಿಗೆ ನಿಜವಾಗಿಯೂ ಹತ್ತಿರವಾಗಿರುವುದು ನಿರ್ದೇಶಕ ಮಾತ್ರ. ಹಾಗಾಗಿ ನಾನು ಹೇಮಂತ್ ಮಾತನ್ನು ಒಪ್ಪಿ, ಎರಡು ಭಾಗಗಳಲ್ಲಿ ಸಿನಿಮಾವನ್ನು ಮಾಡಲು ಒಪ್ಪಿಗೆ ಸೂಚಿಸಿದೆ ಎಂದಿದ್ದಾರೆ ರಕ್ಷಿತ್.

ಸಿನಿಮಾದ ಸೈಡ್ ಬಿ ಅನ್ನು ನೋಡುವಾಗ ನನಗೇ ಅನ್ನಿಸಿತು ಇದು ಖಂಡಿತವಾಗಿ ಎರಡು ಭಾಗಗಳಲ್ಲಿಯೇ ಬರಬೇಕಾಗಿದ್ದ ಸಿನಿಮಾ. ಅದರಲ್ಲಿಯೂ ಇಂದು ಸಿನಿಮಾ ಬಿಡುಗಡೆ ಆದಾಗ ನೋಡಿದಾಗಲಂತೂ ನನಗೆ ಹೆಚ್ಚು ಹೆಚ್ಚು ಅರ್ಥವಾಯಿತು. ಈ ಸಿನಿಮಾ ಎರಡು ಭಾಗದಲ್ಲಿ ಆಗಲೇ ಬೇಕಿತ್ತು. ಎರಡು ಭಾಗಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದಕ್ಕೆ ಖುಷಿಯೂ ಇದೆ. ಜೊತೆಗೆ ಹೇಮಂತ್ ರಾವ್ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಯ್ತು. ಎಷ್ಟು ಸಣ್ಣ-ಸಣ್ಣ ಡೀಟೇಲ್​ಗಳನ್ನು ಸಹ ಅದ್ಭುತವಾಗಿ ಅವರು ತೋರಿಸಿದ್ದಾರೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!