ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ‘ಖಿಲಾಡಿ’ ಅಕ್ಷಯ್ ಕುಮಾರ್ ಸದಾ ಒಂದಿಲ್ಲೊಂದು ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿರುತ್ತಾರೆ. ಶಿಸ್ತುಬದ್ಧ ಜೀವನಕ್ಕೆ ಹೆಸರಾದ ಅವರು, ಇದೀಗ ಅನಿವಾರ್ಯವಾಗಿ ಶೂಟಿಂಗ್‌ನಿಂದ ಸಣ್ಣ ವಿರಾಮ ಪಡೆದಿದ್ದಾರೆ. ಹೌದು, ದೃಷ್ಟಿ ದೋಷ ನಿವಾರಣೆಗಾಗಿ ಅಕ್ಷಯ್ ಕುಮಾರ್ ಅವರಿಗೆ ಮೇ 6ರಂದು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ವೈದ್ಯರ ಸಲಹೆಯಂತೆ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ.
ನಿರ್ದೇಶಕ ಅನೀಸ್ ಬಾಜ್ಮಿ ಅವರ ಮುಂಬರುವ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಇತ್ತೀಚೆಗೆ ಕೇರಳದ ಪ್ರಕೃತಿ ಸೌಂದರ್ಯದ ನಡುವೆ ಚಿತ್ರೀಕರಣ ನಡೆಸುತ್ತಿದ್ದರು. ಅಲ್ಲಿನ ‘ಗ್ಯಾಪ್ ರೋಡ್’ ಎಂಬಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕೇರಳದ ಶೂಟಿಂಗ್ ಶೆಡ್ಯೂಲ್ ಮುಗಿದ ತಕ್ಷಣವೇ ಅಕ್ಷಯ್ ಈ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದರು. ಶಸ್ತ್ರಚಿಕಿತ್ಸೆಯ ಒಂದು ದಿನ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, ಸಹಕಲಾವಿದರಾದ ವಿದ್ಯಾ ಬಾಲನ್, ರಾಶಿ ಖನ್ನಾ ಮತ್ತು ತಂಡಕ್ಕೆ ಧನ್ಯವಾದ ಅರ್ಪಿಸಿದ್ದರು.
ತಮ್ಮ ಅದ್ಭುತ ಫಿಟ್ನೆಸ್‌ಗಾಗಿ ಅಕ್ಷಯ್ ಕುಮಾರ್ ಸದಾ ಸುದ್ದಿಯಲ್ಲಿರುತ್ತಾರೆ. ತಾವು ಕಳೆದ 15 ವರ್ಷಗಳಿಂದ ಈವರೆಗೆ ಒಂದು ಸಮೋಸಾವನ್ನೂ ತಿಂದಿಲ್ಲ ಎಂದು ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಈ ಶಿಸ್ತು ಮತ್ತು ಸಮರ್ಪಣಾ ಮನೋಭಾವವೇ ಇಂದಿಗೂ ಅವರನ್ನು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಅಕ್ಷಯ್ ನಟನೆಯ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಪ್ರಿಯದರ್ಶನ್ ನಿರ್ದೇಶನದ ‘ಭೂತ್ ಬಂಗ್ಲಾ’ ಅಕ್ಷಯ್ ಅವರಿಗೆ ದೊಡ್ಡ ಯಶಸ್ಸು ತಂದುಕೊಡುವ ಮುನ್ಸೂಚನೆ ನೀಡಿದೆ. ಸದ್ಯ ಅವರ ಕೈಯಲ್ಲಿ ‘ವೆಲ್ಕಮ್ ಟು ದಿ ಜಂಗಲ್’, ‘ಹೈವಾನ್’ ಮತ್ತು ಬಹುನಿರೀಕ್ಷಿತ ‘ಗೋಲ್‌ಮಾಲ್ 5’ ನಂತಹ ಸಾಲು ಸಾಲು ಸಿನಿಮಾಗಳಿವೆ. ಕಣ್ಣಿನ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ಅವರು ಮುಂದಿನ ಪ್ರಾಜೆಕ್ಟ್‌ಗಳಿಗೆ ಮರಳಲಿದ್ದಾರೆ.



