ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು (ಜೂನ್ 11) ಬೆಳಗ್ಗೆ ಮೈಸೂರಿನ ರ್ಯಾಡಿಸನ್ ಹೋಟೆಲ್ ನಲ್ಲಿ ನಟ ದರ್ಶನ್ ತೂಗುದೀಪ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಪತ್ರಿಕಾಗೋಷ್ಠಿ ನಡೆಸಿದ್ದಾರೆ “ಜೂನ್ 9 ರಂದು ಭಾನುವಾರ ಕಾಮಾಕ್ಷಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ”. ಆತನ ದೇಹದ ಮೇಲಿರುವ ಗಾಯಗಳನ್ನು ನೋಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದೇವೆ. ನಂತರ ಸಿಸಿಟಿವಿ ಹಾಗೂ ಇತರೆ ತಾಂತ್ರಿಕ ವಿಧಾನಗಳ ಮೂಲಕ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದ್ದು, ರೇಣುಕಾಸ್ವಾಮಿ ಚಿತ್ರದುರ್ಗ ನಿವಾಸಿ ಎಂದು ತಿಳಿದುಬಂದಿದೆ.
ತನಿಖೆ ಮುಂದುವರಿದಂತೆ, ಕನ್ನಡ ಚಲನಚಿತ್ರ ನಟ ದರ್ಶನ್ ಮತ್ತು ಆತನ ಸಹಚರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ದರ್ಶನ್ ಪತ್ನಿಗೆ ಅವಾಚ್ಯ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಹತ್ಯೆಗೈದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ದಯಾನಂದ ಹೇಳಿದರು.
ಇದುವರೆಗೆ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. “ತನಿಖೆಯು ಆರಂಭಿಕ ಹಂತದಲ್ಲಿರುವುದರಿಂದ, ಈ ಹಂತದಲ್ಲಿ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಪೊಲೀಸ್ ಕಮಿಷನರ್ ದಯಾನಂದ ಹೇಳಿದ್ದಾರೆ.