ಹೊಸದಿಗಂತ ವರದಿ ಹುಬ್ಬಳ್ಳಿ:
ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ. ಯಾಕೆ ಮುಖ್ಯ ಮಂತ್ರಿಸಿದ್ದರಾಮಯ್ಯ ಹಾಗೂ ಸರ್ಕಾರಕ್ಕೆ ನಮ್ಮ ಸುಮುದಾಯ ಮೇಲೆ ನಿರ್ಲಕ್ಷ್ಯ ಎಂದು ಶ್ರೀ ಕ್ಷೇತ್ರ ವರೂರಿನ ರಾಷ್ಟ್ರ ಸಂತ ಗುಣಧರನಂದಿ ಮಹರಾಜರು ಕಣ್ಣಿರು ಹಾಕುವ ಮೂಲಕ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. ೧೯ ರಂದು ಬೇಡಿಕೆ ಈಡೇರಿಸಲು ಆಗ್ರಹಿಸಿ ಸರ್ಕಾರಕ್ಕೆ ಬೆಂಗಳೂರು ಚಲೋ ಮೂಲಕ ಕೊನೆಯ ಬಾರಿ ಮನವಿ ಸಲ್ಲಿಸಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೈನ ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು ೭ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭರವಸೆ ನೀಡಿತ್ತು. ಆದರೆ, ಇದುವರೆಗೆ ಮೂರು ಬೇಡಿಕೆಗಳು ಮಾತ್ರ ಈಡೇರಿವೆ. ನಿಗಮ-ಮಂಡಳಿ ಸೇರಿದಂತೆ ಇನ್ನೂ ನಾಲ್ಕು ಬೇಡಿಕೆಗಳು ಬಾಕಿ ಉಳಿದಿವೆ.
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಿಗಮ-ಮಂಡಳಿ ರಚನೆಯ ಬೇಡಿಕೆಯನ್ನು ಸರ್ಕಾರದ ಈಡೇರಿಸಿಲ್ಲ. ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ, ಮಾ. ೧೮ ರಂದು ಮಧ್ಯಾಹ್ನ ಪ್ರತಿ ಹಳ್ಳಿ, ನಗರ ಪ್ರದೇಶದಿಂದ ಜೈನ ಸಮಾಜ ಬಾಂಧವರು ಬೇಂಗಳೂರಿನತ್ತ ಪ್ರಯಾಣಿಸಬೇಕು. ಮಾ. ೧೯ ರಂದು ಬೆಳಗ್ಗೆ ೯ ಗಂಟೆಗೆ ಸಚಿವ ಜಮೀರ ಅಹ್ಮದ್ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ, ನಿಗಮ- ಮಂಡಳಿ ರಚನೆಗೆ ಮನವಿ ನೀಡಲಾಗುವುದು ಎಂದು ಹೇಳಿದರು.
ಸರ್ಕಾರ ಆಗಲೂ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ, ಜೂ.೮ ರಂದು ಅಥಣಿ ತಾಲೂಕಿನ ಐನಾಪೂರದಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಆಯೋಜಿಸಲಾಗುವುದು. ಮುಂದಿನ ಹೋರಾಟದ ಬಗ್ಗೆ ಸಮಾಜದಲ್ಲಿ ನಿರ್ಧರಿಸಲಾಗುವುದು. ಇದೇ ಸಂದರ್ಭದಲ್ಲಿ ಪ್ರತಿ ಹಳ್ಳಿಗೆ ಖುದ್ದಾಗಿ ಭೇಟಿ ನೀಡಿ, ನಿಗಮ-ಮಂಡಳಿ ರಚನೆ ಬಗ್ಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.