ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಐದು ದಿನಗಳಾಗಿದ್ರೂ ಸಿಎಂ ಯಾರು ಎನ್ನುವ ವಿಚಾರ ಕಗ್ಗಂಟಾಗಿಯೇ ಉಳಿದಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ, ಆದರೆ ಇದು ಅಧಿಕೃತ ಘೋಷಣೆ ಅಲ್ಲ. ಬಹುತೇಕ ಎಲ್ಲವೂ ಫೈನಲ್ ಆಗಿದ್ದು, ಇಂದು ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಸಿಎಂ ಯಾರು ಎನ್ನುವ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಸಿಎಂ ಪಟ್ಟಕ್ಕಾಗಿ ಬಿಟ್ಟುಕೊಡದಂತೆ ಹೋರಾಡುತ್ತಿರೋದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಮೊದಲು ದೆಹಲಿಗೆ ಸಿದ್ದರಾಮಯ್ಯ ತೆರಳಿದ್ದು, ತದನಂತರ ಡಿಕೆಶಿ ದೆಹಲಿಗೆ ತೆರಳಿದ್ದಾರೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂಥ ಘಟಾನುಘಟಿ ನಾಯಕರು ಇವರಿಬ್ಬರ ಜೊತೆ ಸತತ ಪ್ರತ್ಯೇಕ ಸಭೆಗಳನ್ನು ಮಾಡಿದ್ದಾರೆ. ಆದರೆ ಒಂದು ಒಪ್ಪಂದಕ್ಕೆ ಬರುವ ಸಾಧ್ಯತೆಯೇ ಕಾಣುತ್ತಿಲ್ಲ. ಡಿಕೆಶಿ ಕೊಟ್ರೆ ಸಿಎಂ ಪಟ್ಟ ಕೊಡಿ ಇಲ್ಲವೇ ಯಾವುದೂ ಬೇಡ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯ ಅರ್ಧಂಬರ್ಧ ಸರ್ಕಾರಕ್ಕೆ ಒಪ್ಪಿಗೆ ನೀಡಿಲ್ಲ, ಕೊಡೋದಾದ್ರೆ ಐದು ವರ್ಷಗಳ ಪೂರ್ಣಾವಧಿ ಸರ್ಕಾರ ಮಾಡಲು ಅವಕಾಶ ನೀಡಿ, ಇಲ್ಲವೇ ಯಾವುದೂ ಬೇಡ ಎಂದು ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ಸಿಎಂ, ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಎನ್ನುವ ಸುದ್ದಿ ನಿನ್ನೆ ಬೆಳಗ್ಗೆಯಿಂದಲೇ ಹರಿದಾಡಿದ್ದು, ಸಿದ್ದು ಬಳಗ ಇದನ್ನು ಸಂಭ್ರಮಿಸಿದೆ. ಇನ್ನು ಚರ್ಚೆ ಅರ್ಧ ಆಗಿರುವಾಗಲೇ ಸಿದ್ದು ಸಿಎಂ ಎಂಬ ಸುದ್ದಿ ಹರಿದಾಡಿದ್ದಕ್ಕೆ ಡಿಕೆಶಿ ಕೆಂಡಕಾರಿದ್ದು, ಮತ್ತಷ್ಟು ಫೈಟ್ ನೀಡೋಕೆ ರೆಡಿಯಾಗಿದ್ದಾರೆ. ಈ ಬಗ್ಗೆ ಸುರ್ಜೇವಾ ಸ್ಪಷ್ಟನೆ ನೀಡಿದ್ದು, ಇನ್ನೂ ಚರ್ಚೆ ಆಗುತ್ತಿದೆ ಎಂದಿದ್ದಾರೆ.
ಒಟ್ಟಾರೆ ಇದು ಬಗೆಹರಿಯದ ಬಿಕ್ಕಟ್ಟಿನಂತೆ ಕಾಣುತ್ತಿದ್ದು, ರಾಜ್ಯದ ಸಿಎಂ ಸಿದ್ದರಾಮಯ್ಯ ಎನ್ನುವವರಿಗೆ ಶಾಕ್ ಆಗುವಂಥ ನಿರ್ಣಯಕ್ಕೆ ಹೈ ಕಮಾಂಡ್ ಬರಲಿದೆಯಾ? ಅಥವಾ ಅಂದುಕೊಂಡದ್ದೇ ನಿಜ ಆಗಲಿದೆಯಾ? ಕಾದುನೋಡಬೇಕಿದೆ..