ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಭೈರತಿ ರಣಗಲ್’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಇಲ್ಲ ಎಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಇದಕ್ಕೆ ನಟ ಶಿವರಾಜ್ ಕುಮಾರ್ ಉತ್ತರ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಶಿವಣ್ಣ, ‘ಪುನೀತ್ ರಾಜ್ ಕುಮಾರ್ ಹುಟ್ಟಿದಾಗಲೇ ನಾನು ಅವನ ಅಭಿಮಾನಿ’ ಎಂದು ಹೇಳಿದ್ದಾರೆ.
ಭೈರತಿ ರಣಗಲ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನೆನಪು ಇಲ್ಲ.. ಅವರ ಫೋಟೋ ಇಲ್ಲ ಎಂದು ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಕಾರ್ಯಕ್ರಮದಲ್ಲಿ ಕರೆ ಮಾಡಿದ್ದ ಅಭಿಮಾನಿಯೋರ್ವ ಕೇಳಿದ್ದು, ಇದಕ್ಕೆ ಉತ್ತರಿಸಿದ ಶಿವಣ್ಣ, ‘ನನ್ನ ಮುಖದಲ್ಲಿ ಅಪ್ಪು ಕಾಣುತ್ತಿಲ್ಲವೇ.. ನನ್ನ ಪಾಲಿಗೆ ಆತ ಇನ್ನೂ ಸತ್ತಿಲ್ಲ.. ಸದಾಕಾಲ ನಮ್ಮೊಂದಿಗೇ ಇರುತ್ತಾನೆ. ಫೋಟೋ ಹಾಕಿ ದೂರ ತಳ್ಳಲು ಇಷ್ಟಪಡುವುದಿಲ್ಲ. ಪುನೀತ್ ಯಾವಾಗಲೂ ನಮ್ಮೊಂದಿಗೇ ಇರುತ್ತಾನೆ. ನನ್ನ ತಮ್ಮನ್ನ ಹೇಗೆ ಪ್ರೀತಿಸಬೇಕು ಎಂಬುದು ನನಗೆ ಗೊತ್ತು. ಪುನೀತ್ ಸಿನಿಮಾ ಎಂದರೆ ಅಭಿಮಾನಿಗಳಿಗಿಂತ ಮೊದಲು ನಾನು ಮುಂದೆ ಇರುತ್ತೇನೆ. ಮೊದಲ ದಿನ ಮೊದಲ ಷೋ ಥಿಯೇಟರ್ ನಲ್ಲಿ ನೋಡುತ್ತಿದ್ದೆ’ ಎಂದು ಹೇಳಿದ್ದಾರೆ.
ನೀವು ಪುನೀತ್ ಗೆ ಅಭಿಮಾನಿಯಾಗುವುದಕ್ಕಿಂತ ಮುಂಚೆ ನಾನು ಆತನ ಅಭಿಮಾನಿಯಾಗಿದ್ದೆ. ಹುಟ್ಟಿನಿಂದಲೇ ನಾನು ಆತನ ವ್ಯಕ್ತಿತ್ವಕ್ಕೆ ಅಭಿಮಾನಿ.ನಟನೆ ಹೊರತುಪಡಿಸಿದರೆ ಆತನ ಗುಣ ನನಗೆ ಇಷ್ಟ. ಹೀಗಾಗಿ ಅಭಿಮಾನಿಗಳು ಕೂಡ ಸಿನಿಮಾವನ್ನು ಸಿನಿಮಾ ರೀತಿಯಲ್ಲಿಯೇ ನೋಡಿ ಎಂದು ಶಿವಣ್ಣ ಮನವಿ ಮಾಡಿದರು.