ಇನ್ನೇನು ಶ್ರಾವಣ ಮಾಸ ಬಂದೇಬಿಡ್ತು. ಭಕ್ತಿಯಲ್ಲಿ ತೊಡಗಿಕೊಳ್ಳೋವರು, ಉಪವಾಸ ಮಾಡೋವರು, ಶಿವನಿಗೆ ಜಲಾಭಿಷೇಕ ಮಾಡುವವರು ಎಲ್ಲೆಂದರೂ ಹೆಚ್ಚು ಕಾಣಸಿಗ್ತಾರೆ. ಈ ಪವಿತ್ರ ತಿಂಗಳು ಬಂದ್ರೆ ಮನಸ್ಸು ಭಕ್ತಿಯಿಂದ ತುಂಬಿ ಹೋಗುತ್ತೆ. ಆದರೆ ಇದರ ಜೊತೆಗೆ ಕೆಲ ಆಹಾರದ ನಿಯಮಗಳೂ ಇರುತ್ತವೆ ಅಂತ ನಿಮಗೆ ಗೊತ್ತಾ? ಹೌದು! ಅದರಲ್ಲೂ “ಈ ತಿಂಗಳಲ್ಲಿ ಮೊಸರು ತಿನ್ನಬಾರದು” ಅನ್ನೋ ಮಾತು ಕೇಳಿರಬಹುದು. ಇದಕ್ಕೆ ಕಾರಣ ಕೇವಲ ಧಾರ್ಮಿಕ ನಂಬಿಕೆಗೆ ಸೀಮಿತವಿಲ್ಲ. ಆಯುರ್ವೇದದ ಜೊತೆಗೆ ವೈಜ್ಞಾನಿಕ ಅರ್ಥವೂ ಇದೆ.
ಧಾರ್ಮಿಕ ನಂಬಿಕೆ ಏನು ಹೇಳುತ್ತೆ?
ಈ ಮಾಸವನ್ನು ಪೂರ್ಣವಾಗಿ ಶಿವನಿಗೆ ಸಮರ್ಪಿಸಲಾಗಿದೆ. ಶಿವನಿಗೆ ಹಾಲು, ಬಿಲ್ವಪತ್ರೆ, ಜಲಾಭಿಷೇಕ ಮುಂತಾದ ಸೇವೆಗಳು ಬಹುಮಾನ್ಯ. ಹೀಗಾಗಿ ಕೆಲ ಪುರಾಣಗಳಲ್ಲಿ ಈ ಸಮಯದಲ್ಲಿ ಮೊಸರು ಸೇವಿಸಬಾರದು ಅಂತ ಹೇಳಲಾಗಿದೆ. ಶುದ್ಧತೆಯ ತಿಂಗಳಲ್ಲಿ ತೀರ್ಥಪಾನ, ಉಪವಾಸದೊಂದಿಗೆ ಆಚರಣೆ ಮಾಡೋದು ಶ್ರೇಷ್ಠ ಅಂತ ಶಿವಪುರಾಣದಲ್ಲಿ ಹೇಳಿದಾರಂತೆ.
ಈ ಕಾಲದಲ್ಲಿ ಆಧ್ಯಾತ್ಮಿಕ ಶುದ್ಧತೆಯೂ ಮುಖ್ಯ. ಆದರೆ ಮೊಸರು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಈ ಆಮ್ಲೀಯ ಗುಣ ದೇಹದ ಆಧ್ಯಾತ್ಮಿಕತೆಗೆ ಅಡ್ಡಿಯಾಗಬಹುದು ಅಂತ ಭಾವನೆ. ಅದ್ದರಿಂದ ಇಡೀ ತಿಂಗಳಲ್ಲಿ ಕಫವನ್ನು ಉಂಟುಮಾಡುವ ಭಾರವಾದ ಆಹಾರಗಳ ತಿನ್ನೋದು ತಪ್ಪಿಸೋದು ಒಳಿತು.
ಆಯುರ್ವೇದ ಏನು ಹೇಳುತ್ತೆ?
ಆಯುರ್ವೇದ ಪ್ರಕಾರ, ಮಳೆಗಾಲದಲ್ಲಿ ದೇಹದಲ್ಲಿ ವಾತ, ಪಿತ್ತ, ಕಫ ಎರಡರಲ್ಲೂ ಏರುಪೇರು ಆಗ್ತದೆ. ಈ ಸಮಯದಲ್ಲಿ ಜೀರ್ಣಶಕ್ತಿ ಕೊಂಚ ಕಡಿಮೆಯಾಗಿರುತ್ತದೆ. ಮೊಸರು ಸೇವನೆಯು ಕಫವನ್ನೂ, ಆಮ್ಲತೆಯನ್ನೂ ಹೆಚ್ಚಿಸಿ ಜೀರ್ಣತಂತ್ರಕ್ಕೆ ತೊಂದರೆ ಕೊಡಬಹುದು. ಇದು ಅಜೀರ್ಣ, ಶೀತ, ಕೆಮ್ಮು, ಉಬ್ಬಸ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.
ವೈಜ್ಞಾನಿಕ ಕಾರಣ
ಮಳೆಗಾಲದಲ್ಲಿ ತಾಪಮಾನ ಕಡಿಮೆ, ತೇವಾಂಶ ಹೆಚ್ಚಿರೋದು ಸಹಜ. ಈ ಕಾಲದಲ್ಲಿ ಮೊಸರು ಹಾಗು ಹಾಲಿನ ಉತ್ಪನ್ನಗಳು ಬೇಗನೆ ಕೆಡುತ್ತವೆ. ಹೀಗಾಗಿ ಮೊಸರು ಸೇವನೆಯು ಫುಡ್ ಪಾಯ್ಸನಿಂಗ್, ಜೀರ್ಣಕ್ರಿಯೆ ತೊಂದರೆ ತಂದೀತು.