ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಲಾಬಿಗೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಿನಿಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿ ಖಾಸಗಿ ಬ್ರ್ಯಾಂಡ್‌ಗಳನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲಾಗುತ್ತದೆ ಎಂದು ಸುಳ್ಳು ಹರಡಿದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಹಾಳುಗೆಡವುತ್ತಿದೆ ಎಂದು ಆರೋಪಿಸಿದ್ದಾರೆ. ಕೆ.ಎಂ.ಎಫ್.ನ ಎಂ.ಡಿ. ಆಗಿದ್ದ ಜಗದೀಶ್ ಅವರನ್ನು ವರ್ಗಾಯಿಸಿದ್ದನ್ನು ಹಾಗೂ ನಂದಿನಿಯ ಬಹುನಿರೀಕ್ಷಿತ ಇಡ್ಲಿ–ದೋಸೆ ಹಿಟ್ಟು ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿರುವ ವರದಿಯನ್ನು ಉಲ್ಲೇಖಿಸಿ ಅವರು ಈ ರೀತಿ ಬರೆದುಕೊಂಡಿದ್ದಾರೆ.
ಐಡಿಯಂತಹ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಸಡ್ಡು ಹೊಡೆದು ಇಡ್ಲಿ/ದೋಸೆ ಹಿಟ್ಟಿನಂತಹ ನವೀನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲೇ, ನಂದಿನಿಯ ಯಶಸ್ಸಿನ ಹಿಂದಿನ ಚಾಲನಾ ಶಕ್ತಿಯಾಗಿದ್ದ ಕೆ.ಎಂ.ಎಫ್. ಎಂ.ಡಿ. ಎಂ.ಕೆ. ಜಗದೀಶ್ ಅವರನ್ನು ಹಠಾತ್ ವರ್ಗಾವಣೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.