ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲ ವಸೂಲಾತಿ ಏಜೆಂಟ್ ಪತ್ನಿಯ ಫೇಕ್ ಅಶ್ಲೀಲ ಚಿತ್ರವನ್ನು ಕಳುಹಿಸಿದ್ದು, ನಿಜವೆಂದು ನಂಬಿ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಮನಗರದ ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ನಿವಾಸಿ ಪ್ರಕಾಶ್(42) ಮೃತರು. ಪ್ರಕಾಶ್ ಪತ್ನಿ ಮಂಗಳವಾರಪೇಟೆಯ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಮಾಡಿದ್ದರು. ಪತ್ನಿಯ ಫೋಟೊ, ಫೋನ್ ನಂಬರ್ ಮುಂತಾದ ವಿವರಗಳನ್ನು ನೀಡಲಾಗಿತ್ತು.
ಸಾಲ ವಸೂಲಾತಿ ಏಜೆಂಟ್ ಕೆಂಪರಾಜು ಪ್ರಕಾಶ್ ಪತ್ನಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ತಡರಾತ್ರಿ ಕರೆ ಮಾಡಿ ಅಶ್ಲೀಲ ಫೋಟೊಗಳನ್ನು ಕಳಿಸುವಂತೆ ಕೇಳಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾರೆ. ಹಾಗಾಗಿ ಆಕೆಯ ಫೋಟೊಗಳನ್ನು ತಿರುಚಿ ಅಶ್ಲೀಲ ಚಿತ್ರ ಮಾಡಿ, ಸಂಬಂಧಿಕರಿಗೆ ತೋರಿಸುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡಿ ಹಣ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದ.
ಇದ್ಯಾವುದಕ್ಕೂ ಆಕೆ ಮಣಿಯಲಿಲ್ಲ, ಆತ ಸಿಟ್ಟಿನಲ್ಲಿ ತಿರುಚಿದ ಫೋಟೊಗಳನ್ನು ಪ್ರಕಾಶ್ ವಾಟ್ಸಾಪ್‌ಗೆ ಕಳುಹಿಸಿದ್ದಾನೆ. ಇದರ ಬಗ್ಗೆ ಪತ್ನಿಗೆ ಒಂದು ಮಾತೂ ಕೇಳದ ಪತಿ ನೋವಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಂಪರಾಜು ವಿರುದ್ಧ ಪತ್ನಿ ದೂರು ದಾಖಲಿಸಿದ್ದಾಳೆ, ಕೆಂಪರಾಜು ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.