ಗಿರಿಜನ ಹಾಡಿಗಳಿಗೆ ವೈ-ಫೈ ಸಂಪರ್ಕ: ಸಚಿವ ಕೋಟ ಸಮಾಲೋಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಸುಧಾರಣೆ ತರುವ ಹಿನ್ನೆಲೆಯಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಎರಡನೇ ವರದಿಯ ಶಿಫಾರಸುಗಳ ಪ್ರತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು.

ಆಡಳಿತ ಸುಧಾರಣೆ ಆಯೋಗದ ಶಿಫಾರಸುಗಳ ಬಗ್ಗೆ ಅಧ್ಯಕ್ಷ ವಿಜಯ ಭಾಸ್ಕರ್ ಅವರು ಎರಡೂ ಇಲಾಖೆಗಳ ಬಗ್ಗೆ ಕರ್ನಾಟಕ ಆಯೋಗದ ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸಚಿವರಿಗೆ ವಿವರಿಸಿದರು. ಈ ವೇಳೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವಂತೆ ಗಿರಿಜನ ಹಾಡಿಗಳಿಗೆ ವೈ-ಫೈ ಸಂಪರ್ಕ, ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ವಸತಿ ಕಲ್ಪಿಸುವ ವಿದ್ಯಾರ್ಥಿನಿಲಯ ನಿರ್ಮಾಣ, ಸಮುದಾಯ ಭವನಗಳ ಪರಿಣಾಮಕಾರಿ ಬಳಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

ಕೇರಳದಲ್ಲಿ ಪ್ರತೀ ಬುಡಕಟ್ಟು ಕಾಲೊನಿಗೆ 7ಲಕ್ಷ ರೂ. ಅಂದಾಜು ವೆಚ್ಚದಲ್ಲಿ ವೈ-ಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಸಹಿತ, ನಿವಾಸಿಗಳಿಗೆ ಆನ್‌ಲೈನ್ ಸೇವೆಗಳ ಸೌಲಭ್ಯ ಬಳಸಲು ಅನುಕೂಲವಾಗಲಿದೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಟಿಎಸ್‌ಪಿ ಅಡಿಯಲ್ಲಿ ಎಲ್ಲ ಎಸ್‌ಟಿ ಕಾಲೊನಿಗಳಿಗೆ ವೈ-ಫೈ ಸೌಲಭ್ಯವನ್ನು ಒದಗಿಸಲು ಯೋಜನೆ ಪ್ರಾರಂಭಿಸಲು ಶಿಫಾರಸು ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಎಲ್ಲ ಸಮುದಾಯದ ಮಕ್ಕಳಿಗೆ ಒಂದೇ ಹಾಸ್ಟೆಲ್
ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ವಸತಿ ವ್ಯವಸ್ಥೆ ಸಿಗುವಂತೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿನಿಲಯ ಸ್ಥಾಪಿಸಬೇಕು. ಇದರಿಂದ ಸಮಾಜದಲ್ಲಿರುವ ಜಾತಿ ತಾರತಮ್ಯ ನಿವಾರಣೆಯಾಗುವುದರೊಂದಿಗೆ ಎಲ್ಲ ಮಕ್ಕಳು ಒಂದಾಗಿ ಬೆರೆತು, ಹೊಂದಾಣಿಕೆ ಬೆಳೆಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಇಲಾಖೆ ಮಟ್ಟದಲ್ಲಿ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ನೀತಿ ರಚನೆ!
ದೇವರಾಜ ಅರಸು, ಅಂಬೇಡ್ಕರ್ ನಿಗಮ ಸಹಿತ ನಾನಾ ನಿಗಮಗಳಿಂದ ನಿರ್ಮಿಸಿರುವ ಸಮುದಾಯಭವನಗಳು ವರ್ಷದಲ್ಲಿ 365 ದಿನವೂ ಬಳಕೆಯಾಗುವುದಿಲ್ಲ. ಕೆಲವೆಡೆ ಇದು ಅಕ್ರಮ ಕೂಟದ ಅಡ್ಡೆಗಳಾಗಿ ಪರಿವರ್ತನೆಗೊಂಡಿವೆ. ಆದ್ದರಿಂದ ಅವುಗಳನ್ನು ವಾಚನಾಲಯ, ಗ್ರಂಥಾಲಯ, ಕೌಶಲ ತರಬೇತಿಗಾಗಿ, ಅಂಗನವಾಡಿ ನಡೆಸಲು ಇತ್ಯಾದಿಗಳ ಬಳಕೆಗೆ ಅನುಮತಿಸಲು ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಸಮುದಾಯ ಭವನಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸುವ ವ್ಯವಸ್ಥೆ, ಸಮುದಾಯ ಭವನಗಳ ನಿರ್ಮಾಣಕ್ಕೆ ನೀತಿ ರೂಪಿಸಬೇಕು ಹಾಗೂ ಗಿರಿಜನ ಕಾಲೊನಿಗಳಲ್ಲಿ ಸಮುದಾಯ ನಿರ್ಮಿಸಬೇಕು ಎಂದು ಸಚಿವ ಕೋಟ ಹೇಳಿದರು.

ದಾಖಲಾತಿ ಕಡಿಮೆ ಇದ್ದ ಹಾಸ್ಟೆಲ್‌ಗಳ ವಿಲೀನ!
ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾದ ಸಾಮರ್ಥ್ಯಕ್ಕಿಂತ ಶೇ. 50ಕ್ಕಿಂತ ಕಡಿಮೆ ದಾಖಲಾತಿ ಇರುವ 103 ವಿದ್ಯಾರ್ಥಿನಿಲಯಗಳನ್ನು ವಿಲೀನಗೊಳಿಸಿ, ಈ ವಿದ್ಯಾರ್ಥಿನಿಲಯಗಳನ್ನು ಆವಶ್ಯಕತೆ ಇರುವಲ್ಲಿ ಪ್ರಾರಂಭಿಸುವ ಕುರಿತು ಪರಿಶೀಲಿಸಬೇಕು. ವಿದ್ಯಾರ್ಥಿನಿಲಯಗಳಿಗೆ ನಿವೇಶನ ಕಾಯ್ದಿರಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಶೇ. 50ರಷ್ಟು ಅಡುಗೆಯವರ ಹುದ್ದೆಗಳು ಖಾಲಿ ಇವೆ. ಆದ್ದರಿಂದ ಆಹಾರ ಪೂರೈಕೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪೂರೈಕೆಯನ್ನು ಬೆಂಗಳೂರು ಅಥವಾ ಆಯ್ದ ಜಿಲ್ಲಾ ಕೇಂದ್ರಗಳ ವಿದ್ಯಾರ್ಥಿನಿಲಯಗಳಲ್ಲಿ ಪ್ರಾಯೋಗಿಕವಾಗಿ ನಡೆಸಲು ಸಚಿವರು ನಿರ್ದೇಶನ ನೀಡಿದರು.

ಇಂಧನ, ನೀರಾವರಿ, ಪೌರಾಡಳಿತ, ಲೋಕೋಪಯೋಗಿ ಸಹಿತ ವಿವಿಧ ಇಲಾಖೆಗಳ ಶೇ. 7.25 ಮೀಸಲಾತಿ ಅನುದಾನವನ್ನು ವ್ಯಕ್ತಿಗತ ಫಲಾನುಭವಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಮಾಡಲು ಕ್ರಮಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ಆಯುಕ್ತ ದಯಾನಂದ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿ ಕುಮಾರ್ ಸುರಪುರ, ನಿವೃತ್ತ ಅಧಿಕಾರಿ ಹಾಗೂ ಇಲಾಖೆಯ ಸಲಹೆಗಾರ ವೆಂಕಟಯ್ಯ ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚುವರಿ ಹಾಸ್ಟೆಲ್‌ಗಳಿಗೆ ಸಿಎಂಗೆ ಪ್ರಸ್ತಾವ ಸಲ್ಲಿಕೆ:
ಹಿಂದುಳಿವ ವರ್ಗಗಳ ಅಭಿವೃದ್ಧಿಯಾಗಬೇಕೆಂದರೆ ಮಕ್ಕಳಿಗೆ ಶಿಕ್ಷಣ ನೀಡುವುದೇ ಗುರಿಯಾಗಬೇಕು. ರಸ್ತೆ ಮಾಡುವುದು, ಸಮುದಾಯ ಭವನ ಕಟ್ಟುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದಲ್ಲಿ 1.02 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ಕೊರತೆ ಇದೆ. ಈ ಪೈಕಿ ಆರಂಭಿಕವಾಗಿ 30,000 ವಿದ್ಯಾರ್ಥಿಗಳಿಗೆ ನಗರ ಪ್ರದೇಶದಲ್ಲಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಆರಂಭಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ.
ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಮತ್ತು ಹಿಂ.ವ. ಕಲ್ಯಾಣ ಸಚಿವರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!