ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡು ಭಾಗದಲ್ಲಿ ಮತ್ತೆ ಕಾಡುಜೀವಿಗಳ ಹಾವಳಿ ಹೆಚ್ಚುತ್ತಿದ್ದು, ಈ ನಡುವೆ ಕಾಡುಕೋಣದ ದಾಳಿಯಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್‌ನಲ್ಲಿ ಈ ದಾರುಣ ಘಟನೆ ನಡೆದಿದೆ.
ಮೃತರನ್ನು ಚೇತನ್ (30) ಎಂದು ಗುರುತಿಸಲಾಗಿದೆ.
ಕಾಡುಕೋಣ ದಾಳಿ ವೇಳೆ ಅದರ ಕೊಂಬು ಚೇತನ್ ಅವರ ಎದೆಗೆ ತೀವ್ರವಾಗಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಳಸ ಆಸ್ಪತ್ರೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ತಿಳಿದ ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದು, ಮಗನನ್ನು ಕಳೆದುಕೊಂಡ ತಾಯಿ ಹಾಗೂ ಬಂಧುಗಳ ಆಕ್ರಂದನ ಮನಕಲಕುವಂತಿತ್ತು.
ಕಳಸ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡುಕೋಣಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರನ್ನು ಭೀತಿಗೊಳಿಸಿದೆ. ಈ ಹಿಂದೆ ಕೂಡ ಹಲವರು ಗಾಯಗೊಂಡಿದ್ದು, ಕೆಲವರು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ.



