ಹೊಸದಿಗಂತ ವರದಿ ಮಡಿಕೇರಿ:
ಬೈಕ್’ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಗ್ರಾಮದಲ್ಲಿರುವ ಸಿಐಟಿ ಕಾಲೇಜು ಬಳಿ ಈ ದುರ್ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮೊಹಮ್ಮದ್ ಫೈಜನ್ ಹಾಗೂ ಅಬುರ್ ಉವೈಸ್ ಎಂಬವರನ್ನು ಗೋಣಿಕೊಪ್ಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದೆಡೆ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೊಂದು ಬೀಡು ಬಿಟ್ಟಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ರೋಸಿ ಹೋಗಿದ್ದಾರೆ. ಗ್ರಾಮದ ಕಾಳೇಂಗಡ ಜಯ ಅವರ ಗದ್ದೆಯಲ್ಲಿದ್ದ ಭತ್ತದ ಹೊರೆಯನ್ನು ಕಾಡಾನೆಗಳು ತಿಂದು ತೇಗಿದ್ದು, ಇದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಪೊನ್ನಂಪೇಟೆ ವಲಯ ಅರಣ್ಯಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.
ಆದರೆ ಗ್ರಾಮದಲ್ಲಿ ಪ್ರತಿನಿತ್ಯ ಆನೆ ಹಾವಳಿ ಹೆಚ್ಚಾಗಿದ್ದು, ಈ ಆನೆಯ ಹಿಂಡನ್ನು ಓಡಿಸದಿದ್ದಲ್ಲಿ ಪೊನ್ನಂಪೇಟೆ ಅರಣ್ಯ ಇಲಾಖೆಯ ಮುಂದೆ ಧರಣಿ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.