ವನ್ಯಜೀವಿ- ಮಾನವ ಸಂಘರ್ಷ ಹೆಚ್ಚಿಸುವ ಚತುಷ್ಪಥ ಹೆದ್ದಾರಿ- ರೈಲ್ವೆ ಯೋಜನೆ ಕೈಬಿಡಿ: ಕರ್ನಲ್ ಮುತ್ತಣ್ಣ

ಹೊಸದಿಗಂತ ವರದಿ, ಮಡಿಕೇರಿ
ವನ್ಯ ಮೃಗಗಳು ಮತ್ತು ಮಾನವನ ನಡುವಿನ ಸಂಘರ್ಷ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗುವ ಚತುಷ್ಪಥ ಹೆದ್ದಾರಿ, ರೈಲ್ವೆ ಸಂಪರ್ಕ, ಭೂ ಪರಿವರ್ತನೆ ಯೋಜನೆಗಳನ್ನು ಕೈಬಿಡುವಂತೆ ಎಂದು ಸೇವ್ ಕೊಡಗು ಮತ್ತು ಕಾವೇರಿ ಅಭಿಯಾನದ ಸಂಚಾಲಕ, ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡೂವರೆ ದಶಕಗಳಿಂದ ಕಾಡಾನೆಗಳ ಉಪಟಳ ಮಿತಿಮೀರಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವಳಿಯೂ ಕಾಣಿಸಿಕೊಂಡು ಗ್ರಾಮೀಣರ ಬದುಕನ್ನು ಹೈರಾಣಾಗಿಸಿದೆ. ಇದರ ನಿಯಂತ್ರಣಕ್ಕೆ ಮೇಲ್ನೋಟಕ್ಕೆ ಕಾಣುವ ಆನೆ ಕಂದಕ, ಸೋಲಾರ್ ತಂತಿ ಬೇಲಿ ಅಳವಡಿಕೆಗಳನ್ನಷ್ಟೇ ಮಾಡಿದರೆ ಪ್ರಯೋಜನವಿಲ್ಲ. ಸಮಸ್ಯೆಯ ಮೂಲ ಕಾರಣವನ್ನು ಅರಿತು ಬಗೆಹರಿಸುವ ಪ್ರಯತ್ನ ನಡೆಯಬೇಕೆಂದು ಒತ್ತಾಯಿಸಿದರು.
ಅಭಿವೃದ್ಧಿಯ ನೆಪದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಬೃಹತ್ ಯೋಜನೆಗಳಿಂದ ಮರಗಳು ನಾಶವಾಗಿ ತಮ್ಮ ಆವಾಸ ಸ್ಥಾನಕ್ಕೆ ಧಕ್ಕೆಯುಂಟಾಗಿರುವುದೇ ‘ವನ್ಯ ಮೃಗಗಳು-ಮಾನವ’ ಸಂಘರ್ಷಕ್ಕೆ ಕಾರಣವಾಗಿದೆಯೆಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿಗಳ ಭೇಟಿ:
ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಉಂಟಾಗುತ್ತಿರುವ ಅರಣ್ಯ ನಾಶ, ಇದರಿಂದ ಉದ್ಭವಿಸಿರುವ ವನ್ಯ ಮೃಗಗಳು ಮತ್ತು ಮಾನವನ ಸಂಘರ್ಷ, ಅರಣ್ಯ, ಪರಿಸರದ ನಾಶದಿಂದ ಕಾವೇರಿ ಜಲಾನಯನ ಪ್ರದೇಶಕ್ಕೆ ಹಾನಿಯುಂಟಾಗುತ್ತಿರುವ ಅಂಶಗಳ ಬಗ್ಗೆ ಶೀಘ್ರದಲ್ಲೇ ಜಿಲ್ಲೆಯ ಶಾಸಕರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವರವಾದ ಮಾಹಿತಿಯನ್ನು ನೀಡಲಿರುವುದಾಗಿ ಸ್ಪಷ್ಟಪಡಿಸಿದರು.
ಲಕ್ಷಾಂತರ ಮರಗಳ ಹನನ: 2014ರಲ್ಲಿ ಕೊಡಗಿನ ಮೂಲಕ 400 ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣದ ಸಂದರ್ಭ, ದೊಡ್ಡ ಪ್ರಮಾಣದಲ್ಲಿ ಮರಗಳ ಹನನ ನಡೆಯಿತು. ಈ ಸಂದರ್ಭ ಅರಣ್ಯದಲ್ಲಿದ್ದ ಕಾಡಾನೆಗಳು ಗ್ರಾಮೀಣ ಭಾಗಗಳಲ್ಲಿ ನಡೆಸಿದ ದಾಳಿಯಿಂದ ಹತ್ತು ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಎರಡು ರೈಲ್ವೆ ಯೋಜನೆಗಳು ಮತ್ತು ಚತುಷ್ಪಥದ ಏಳು ಹೆದ್ದಾರಿಗಳ ನಿರ್ಮಾಣದ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಚೆನ್ನರಾಯಪಟ್ಟಣ- ಕೊಡ್ಲಿಪೇಟೆ- ಮಡಿಕೇರಿ- ವೀರಾಜಪೇಟೆ- ಮಾಕುಟ್ಟ- ಕೇರಳ ನಡುವಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಜೆಟ್‍ನಲ್ಲಿ 1600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದರೊಂದಿಗೆ ಎರಡು ರೈಲ್ವೆ ಮಾರ್ಗಗಳು, ಹೆದ್ದಾರಿಗಳ ನಿರ್ಮಾಣ 20 ಸಾವಿರ ಕೊಟಿ ವೆಚ್ಚದ್ದಾಗಿದೆ. ಇವುಗಳನ್ನು ಕೊಡಗಿನ ಪ್ರಾಕೃತಿಕ ಸಂಪತ್ತಿನ ನಾಶಕ್ಕೆ ವಿನಿಯೋಗಿಸದೆ ಮಲೆನಾಡ ಭಾಗದ ಜನರ ಶ್ರೇಯೋಭಿವೃದ್ಧಿಗೆ ಬಳಸಬೇಕೆಂದು ಕರ್ನಲ್ ಸಿ.ಪಿ. ಮುತ್ತಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಭೂಪರಿವರ್ತನೆ ಸಲ್ಲದು:
ಕೊಡಗಿನಲ್ಲಿ 2005 ರಿಂದ 2015ರ ನಡುವೆ ಸುಮಾರು 3 ಸಾವಿರ ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡಲಾಗಿದೆ. ಇದು ಕಾಡಾನೆಗಳ ಪಥವನ್ನು ಹಾಳುಗೆಡಹಿರುವುದು ಸಹ ಆನೆಗಳ ಉಪಟಳ ಹೆಚ್ಚಾಗಲು ಕಾರಣವೆಂದು ತಿಳಿಸಿದ ಕರ್ನಲ್ ಮುತ್ತಣ್ಣ, ಜಿಲ್ಲೆಯಲ್ಲಿನ ವನ್ಯ ಮೃಗಗಳ ಹಾವಳಿಯನ್ನು ನಿಗ್ರಹಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆಯೊಂದರ ಮೇಲಷ್ಟೇ ಹೊರಿಸಲಾಗುತ್ತಿದೆ. ಜಿಲ್ಲಾಡಳಿತವು ಸಮಸ್ಯೆಯ ಬಗೆಹರಿಕೆಗೆ ತನ್ನ ಸಹಭಾಗಿತ್ವವನ್ನು ನೀಡಬೇಕು ಮತ್ತು ಕನಿಷ್ಟ ಎರಡು ತಿಂಗಳಿಗೊಮ್ಮೆಯಾದರೂ ಅಧಿಕಾರಿಗಳು, ಬೆಳೆಗಾರರು, ಸಂಘ ಸಂಸ್ಥೆಗಳ ಸಭೆ ನಡೆಸಿ ಸಮಸ್ಯೆ ಬಗ್ಗೆ ಚರ್ಚಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸತ್ಯಾನ್ವೇಷಣಾ ಸಮಿತಿಯ ಪ್ರಮುಖರಾದ ಸನ್ನಿ ಸೋಮಣ್ಣ, ಕಾವೇರಿ ಸೇನೆಯ ಅಧ್ಯಕ್ಷ ರವಿ ಚಂಗಪ್ಪ, ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಸಂಚಾಲಕ ಮೇಜರ್ ಬಿ.ಎ. ನಂಜಪ್ಪ ಹಾಗೂ ಮಲಚೀರ ಶ್ಯಾಂ ಬೋಪಣ್ಣ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!